ನವದೆಹಲಿ, ಜ 9 (Daijiworld News/MB) : ವಿದೇಶಿ ರಾಜತಾಂತ್ರಿಕರ ನಿಯೋಗ ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಕ್ರಮ, ಪ್ರಯತ್ನಗಳ ಬಗ್ಗೆ ಮನವರಿಕೆ ಮಾಡುವ ಸಲುವಾಗಿ ಇಂದು ಕಣಿವೆಗೆ ಭೇಟಿ ನೀಡಲಿದೆ.
ಕೇಂದ್ರ ಸರಕಾರ ಕಳೆದ ಆಗಸ್ಟ್ನಲ್ಲಿ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿ ಈ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶವಾಗಿ ವಿಭಜಿಸಿದೆ. ಈ ಹಿನ್ನಲೆಯಲ್ಲಿ ಈ ಪ್ರದೇಶಕ್ಕೆ ಬೇಟಿ ನೀಡಬೇಕು ಎಂದು ವಿದೇಶಿ ರಾಜತಾಂತ್ರಿಕರು ತಿಳಿಸಿದ್ದು ಎರಡು ದಿನಗಳ ಪ್ರವಾಸವನ್ನು ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
ಕಾಶ್ಮೀರಕ್ಕೆ ಬೇಟಿ ನೀಡುತ್ತಿರುವ ಮೊದಲ ನಿಯೋಗ ಇದಾಗಿದ್ದು ಮಧ್ಯಪ್ರಾಚ್ಯ, ಆಫ್ರಿಕಾ ಹಾಗೂ ಲ್ಯಾಟಿನ್ ಅಮೆರಿಕ ಹೀಗೆ ವಿಭಿನ್ನ ಪ್ರದೇಶಗಳಿಂದ ರಾಜತಾಂತ್ರಿಕರನ್ನು ಆಯ್ಕೆ ಮಾಡಲಾಗಿದೆ.
ಈ ರಾಜತಾಂತ್ರಿಕ ನಿಯೋಗದ ಸದಸ್ಯರು ಪಂಚಾಯತ್ ಸದಸ್ಯರು ಹಾಗೂ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸ್ವಯಂಸೇವಾ ಸಂಸ್ಥೆಗಳ ಮುಖ್ಯಸ್ಥರನ್ನು ಭೇಟಿ ಮಾಡಲಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಯೂರೋಪ್ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಕೆಲ ದೇಶಗಳ ರಾಜತಾಂತ್ರಿಕರು ಭೇಟಿಯನ್ನು ಖಚಿತಪಡಿಸಿಲ್ಲ. ಹಾಗಾಗಿ ಕೊನೆಕ್ಷಣದಲ್ಲಿ ಈ ನಿಯೋಗದಲ್ಲಿರುವ ವಿದೇಶಿ ರಾಜತಾಂತ್ರಿಕರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ನಿಯೋಗದಲ್ಲಿ ಯೂರೋಪಿಯನ್ ಒಕ್ಕೂಟದ ರಾಜತಾಂತ್ರಿಕರು ಇರದೆ ಬೇರೆ ದಿನ ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಇಯು ರಾಜತಾಂತ್ರಿಕರು ಈ ಸಂಬಂಧ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜತೆ ಮಾತುಕತೆ ನಡೆಸಿದ್ದು, ಸದ್ಯದಲ್ಲೇ ದಿನ ನಿಗದಿಯಾಗಲಿದೆ ಎಂದು ವರದಿಯಾಗಿದೆ.