ಮುಂಬೈ, ಜ.09 (Daijiworld News/PY) : ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹಾಗೂ ಗ್ಯಾಂಗ್ಸ್ಟರ್ ಛೋಟಾ ರಾಜನ್ ಮಾಜಿ ಸಹಚರ ಎಜಾಜ್ ಲಕ್ಡಾವಾಲಾನನ್ನು ಬುಧವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಈತ ಎರಡು ದಶಕಗಳಿಂದ ದೇಶದ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದು, 20 ವರ್ಷಗಳಿಂದ ಹಲವು ಭೂಗತ ಪಾತಕಿಗಳ ಜೊತೆ ನಂಟು ಹೊಂದಿದ್ದ.
ಎಜಾಜ್ ಮೇಲೆ ಕೊಲೆ, ಸುಲಿಗೆ ಹಾಗೂ ಹಿಂಸಾಚಾರ ಸೇರಿದಂತೆ 25ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ 6 ತಿಂಗಳಿನಿಂದ ಎಜಾಜ್ನನ್ನು ಬಂಧಿಸಲು ನಾವು ಪ್ರಯತ್ನಪಡುತ್ತಿದ್ದೆವು, ಆದರೆ ಆತನನ್ನು ಬಂಧಿಸಲು ಯಾವುದೇ ಖಚಿತ ಮಾಹಿತಿ ಸಿಗಲಿಲ್ಲ. ಈ ಹಿನ್ನೆಲೆ ಬುಧವಾರದಂದು ಪಾಟ್ನಾದ ಮನೆಗೆ ಭೇಟಿ ನೀಡಿದ ಸಂದರ್ಭ ಎಜಾಜ್ ಲಕ್ಡಾವಾಲಾನನ್ನು ಸೆರೆಹಿಡಿಯಲಾಯಿತು ಎಂದು ವರದಿ ತಿಳಿಸಿದೆ.
ಎಜಾಜ್ ಲಕ್ಡಾವಾಲಾನನ್ನು ಬಂಧಿಸಿ ಮುಂಬೈಗೆ ಕರೆತರಲಾಗಿದ್ದು, ಆತನನ್ನು ವಿಚಾರಣೆ ಮಾಡಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ರಸ್ತೋಗಿ ತಿಳಿಸಿದ್ಧಾರೆ.