ನವದೆಹಲಿ, ಜ.09 (Daijiworld News/PY) : ಹಿಂಸಾಚಾರವನ್ನು ಹತ್ತಿಕ್ಕುವಲ್ಲಿ ಹಾಗೂ ಸಂತ್ರಸ್ತ ವಿದ್ಯಾರ್ಥಿಗಳಿಗೆ ರಕ್ಷಣೆ ನೀಡುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂಬ ಟೀಕೆಗೆ ಗುರಿಯಾಗಿದ್ದ ಪೊಲೀಸರ ಪರ ಮಾತನಾಡಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜ.5ರಂದು ಜೆ.ಎನ್.ಯು. ಕ್ಯಾಂಪಸ್ನಲ್ಲಿ ನಡೆದ ವಿದ್ಯಾರ್ಥಿ ಘರ್ಷಣೆಯನ್ನು ತಡೆಯಲು ಪೊಲೀಸರಿಗೆ ಆದೇಶವೇ ದೊರೆತಿರಲಿಲ್ಲ ಎಂದು ಹೇಳಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆ.ಎನ್.ಯು. ಕ್ಯಾಂಪಸ್ನಲ್ಲಿ ನಡೆದ ವಿದ್ಯಾರ್ಥಿ ಘರ್ಷಣೆಯನ್ನು ತಡೆಯಲು ಪೊಲೀಸರಿಗೆ ಆದೇಶವೇ ಸಿಕ್ಕಿರಲಿಲ್ಲ, ದೆಹಲಿ ಪೊಲೀಸ್ ಇಲಾಖೆಯು ನೇರವಾಗಿ ಕೇಂದ್ರ ಗೃಹ ಸಚಿವಾಲಯದ ನಿಯಂತ್ರಣದಲ್ಲಿ ಬರುತ್ತದೆ ಎಂದು ಹೇಳಿದ್ದಾರೆ.
ಹಿಂಸಾಚಾರವನ್ನು ತಡೆಯಲು ಮತ್ತು ಕಾನೂನು ಸುವ್ಯವಸ್ಥೆಯನ್ನು ಪಾಲಿಸಲು ಪೊಲೀಸರಿಗೆ ಆದೇಶ ಸಿಗಲಿಲ್ಲ ಎಂದಾದರೆ, ದೆಹಲಿ ಪೊಲೀಸರು ಏನು ಮಾಡಲು ಸಾಧ್ಯ, ಈ ಆದೇಶಗಳನ್ನು ಪಾಲಿಸಲಿಲ್ಲ ಎಂದಾದರೆ, ಅವರು ತಮ್ಮ ಕೆಲಸವನ್ನು ಕಳೆದುಕೊಳ್ಳುತ್ತಿದ್ದರು ಎಂದು ತಿಳಿಸಿದ್ದಾರೆ.