ಬೆಂಗಳೂರು, ಜ 10 (Daijiworld News/MSP): ಸರ್ಕಾರಿ ಶಾಲೆಯಲ್ಲಿ ಶಿಕ್ಷಕರೊಬ್ಬರು ಪಕ್ಕೆಲುಬು ಎಂಬ ಪದವನ್ನು ಉಚ್ಚರಿಸುವಂತೆ ವಿದ್ಯಾರ್ಥಿಗಳಿಗೆ ಹೇಳಿಕೊಡುತ್ತಿರುವ ಮತ್ತು ಆ ಪದವನ್ನು ಸರಿಯಾಗಿ ಉಚ್ಚರಿಸಲಾಗದ ವಿದ್ಯಾರ್ಥಿ ಕಷ್ಟಪಡುತ್ತಿರುವ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ಶಾಲೆ ಶಿಕ್ಷಕ ಹಾಗೂ ಮುಖ್ಯ ಶಿಕ್ಷಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ತಿಳಿಸಿದ್ದಾರೆ.
ಪಕ್ಕೆಲುಬು ಪದ ಸರಿಯಾಗಿ ಉಚ್ಚರಿಸಲಾಗದೇ ವಿದ್ಯಾರ್ಥಿ ಪದೇ ಪದೇ ಅದೇ ಪದವನ್ನು ಹೇಳುವಂತೆ ಒತ್ತಾಯಿಸುತ್ತಾ ಶಿಕ್ಷಕ ಕಪಾಳಕ್ಕೆ ಹೊಡೆದಿರುವ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಸಚಿವರು ಗುರುವಾರ ಆದೇಶ ಹೊರಡಿಸಿದ್ದು, ಯಾವ ಶಾಲೆಯಲ್ಲಿ ಈ ಘಟನೆ ನಡೆದಿದೆ ಎಂಬುದನ್ನು ತಿಳಿಯುವುದಕ್ಕಾಗಿ ಸೈಬರ್ ಕ್ರೈಂ ಠಾಣೆ ದೂರು ನೀಡಿದ್ದು, ಸಂಬಂಧಪಟ್ಟ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಅವರಿಗೆ ಪತ್ರ ಬರೆಯಲಾಗಿತ್ತು
ಮಕ್ಕಳು ತಪ್ಪು ಉಚ್ಚಾರ ಮಾಡುವುದು ಸಹಜ. ನಿರಂತರ ಕಲಿಕೆಯ ನಂತರ ಆ ಪದದ ಬಗ್ಗೆ ಸ್ಪಷ್ಟತೆ ಸಿಕ್ಕಾಗ ಸರಿಯಾದ ಉಚ್ಚಾರ ಮಾಡುವುದು ಸಾಧ್ಯವಾಗಲಿದೆ. ಶಿಕ್ಷಕರಾದವರು ಮಕ್ಕಳಿಗೆ ಸರಿಯಾದ ಉಚ್ಚಾರ ಮಾಡಿಸಬೇಕೇ ವಿನಃ ಅದನ್ನೇ ದೊಡ್ಡ ಅಪರಾಧವೆಂಬಂತೆ ಬಿಂಬಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದು ಕೂಡ ಅಪರಾಧವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ