ಚೆನ್ನೈ, ಜ 10 (Daijiworld News/MSP): ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಮೇಲೆ ಮುಸುಕುಧಾರಿಗಳು ನಡೆಸಿರುವ ಮಾರಕಾಸ್ತ್ರಗಳಿಂದ ದಾಳಿ ನಡೆಸಿರುವ ಘಟನೆ ಬಗ್ಗೆ ಬಾಲಿವುಡ್ ನಟಿ ಕಂಗನಾ ರೌನಾವತ್ ಪ್ರತಿಕ್ರಿಯಿಸಿದ್ದಾರೆ.
ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಈ ತರಹದ ಗ್ಯಾಂಗ್ ವಾರ್, ಹೊಡೆದಾಟ ಸಾಮಾನ್ಯ, ಇದನ್ನು ಒಂದು ರಾಷ್ಟ್ರಮಟ್ಟದ ವಿಷಯವೆಂಬಂತೆ ಬಿಂಬಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳ ಮೇಲಿನ ಹಿಂಸೆ ಖಂಡಿಸಿ ಪ್ರತಿಭಟನೆಯಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ದೆಹಲಿ ಜೆ ಎನ್ ಯುಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿದ್ದರು. ಈ ವಿಚಾರ ಸಾಕಷ್ಟು ಪರ ವಿರೋಧ ಚರ್ಚೆಗೆ ಕಾರಣವಾಗಿತ್ತು.
ಇದರ ಬೆನ್ನಲ್ಲೇ ಘಟನೆಯ ಕುರಿತಾಗಿ ಪ್ರತಿಕ್ರಿಯಿಸಿರುವ ನಟಿ ಕಂಗನಾ , ಹೀಗೆ ಕಾಲೇಜುಗಳಲ್ಲಿ ಹಿಂಸಾಚಾರ ನಡೆಸುವವರನ್ನು ಪೊಲೀಸ್ ಕಸ್ಡಡಿಗೆ ಕರೆದೊಯ್ದು ನಾಲ್ಕು ಏಟು ಕೊಡಬೇಕೆಂದರು. ತಮ್ಮ ಕಾಲೇಜು ದಿನಗಳನ್ನು ನೆನಪಿಸಿಕೊಂಡ ಕಂಗನಾ ನಾವು ಚಂಡೀಗಢದಲ್ಲಿ ಕಾಲೇಜಿನಲ್ಲಿ ಓದುತ್ತಿದ್ದಾಗ, ಹಾಸ್ಟೆಲ್ ನಲ್ಲಿ ಹುಡುಗರು ಗುಂಪು ಕಟ್ಟಿಕೊಂಡು ಒಬ್ಬರಿಗೊಬ್ಬರು ಹೊಡೆದಾಡಿಕೊಳ್ಳುವುದು, ಅಟ್ಟಿಸಿಕೊಂಡು ಹೋಗುವುದು ಕೊನೆಗೆ ಸಾರ್ವಜನಿಕವಾಗಿ ಕೊಲೆ ಮಾಡಲು ಕೂಡ ಹೇಸುತ್ತಿರಲಿಲ್ಲ. ಈಗಲೂ ಕೂಡ ಪರಿಸ್ಥಿತಿ ಹಾಗೆಯೇ ಇದೆ.
ಇಂತಹ ಹೊಡೆದಾಟ, ಗ್ಯಾಂಗ್ ವಾರ್ ಗಳನ್ನು ಚಂಚಲಮನಸ್ಸಿನ ವ್ಯಕ್ತಿಗಳು ಮಾಡುತ್ತಾರೆ. ಗೂಂಡಾಗಳು ಪ್ರತಿ ತರಗತಿಗಳಲ್ಲಿ, ಪ್ರತಿ ಪ್ರದೇಶದಲ್ಲಿ ಕಾಣಸಿಗುತ್ತಾರೆ, ಹೀಗಾಗಿ ಇಂತಹ ವಿಚಾರಗಳನ್ನು ರಾಷ್ಟ್ರಮಟ್ಟದಲ್ಲಿ ಪ್ರಾಧಾನ್ಯತೆ ನೀಡುವ ಅಗತ್ಯವಿಲ್ಲ ಎಂದು ಮನವಿ ಮಾಡಿಕೊಂಡರು.