ಬೆಂಗಳೂರು, ಜ 10 (Daijiworld News/MSP): ಗಗನಕ್ಕೇರಿದ ಈರುಳ್ಳಿ ಬೆಲೆಯಿಂದ ತತ್ತರಿಸಿದ್ದ ಜನತೆ ಇದೀಗ ಸುಧಾರಿಸಿಕೊಳ್ಳವ ಮುನ್ನವೇ ಮತ್ತೊಂದು ಶಾಕ್ ಎದುರಾಗಿದ್ದು, ಒಣ ಮೆಣಸಿನಕಾಯಿ ದರ ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದೆ.
ಈರುಳ್ಳಿ ಬೆಲೆ ಕಣ್ಣೀರು ತರಿಸಿದ್ರೆ, ಈಗ ಮೆಣಸಿನ ಖಾರಕ್ಕೆ ಕಣ್ಣೀರು ಹಾಕುವಷ್ಟು ದರ ಏರಿಕೆಯಾಗಿದೆ. ಗದಗದ ರೈತರು ತಂದಿದ್ದ ಬ್ಯಾಡಗಿ ಮೆಣಸಿಕಾಯಿ ಅಲ್ಲಿನ ಎಪಿಎಂಸಿಯಲ್ಲಿ ಒಂದು ಕ್ವಿಂಟಾಲ್ ಗೆ ಬರೋಬ್ಬರಿ 33,259 ರೂ.ಗೆ ಮಾರಾಟವಾಗುವ ಮೂಲಕ ದಾಖಲೆ ನಿರ್ಮಿಸಿದೆ.
ಕಡ್ಡಿ ಮೆಣಸಿಕಾಯಿ ಪ್ರತಿ ಕ್ವಿಂಟಾಲ್ ಗೆ 18,609 ರೂ. ಮತ್ತು ಗುಂಟೂರು ತಳಿ 9,009 ರೂ.ಗೆ ಮಾರಾಟವಾಗಿವೆ. ದಿನಬಳಕೆಯ ಅಗತ್ಯ ವಸ್ತುವಾದ ಈರುಳ್ಳಿ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರು ಇದೀಗ ಒಣ ಮೆಣಸಿನಕಾಯಿಯ ದರವನ್ನು ಕೇಳಿ ಕಣ್ಣು ಕೆಂಪಾಗಿಸಿಕೊಂಡಿದ್ದಾರೆ.