ಬೆಂಗಳೂರು, ಜ 10 (Daijiworld News/MSP): ಮಂಗಳೂರಿನಲ್ಲಿ ನಡೆದ ಹಿಂಸಾಚಾರದ ಗಲಭೆಗೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯವರು ಸ್ಪೋಟಕ ವಿಡಿಯೋಗಳನ್ನು ರಿಲೀಸ್ ಮಾಡಿದ್ದಾರೆ.
ನಗರದ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ 35 ವಿಡಿಯೋಗಳನ್ನು ಬಿಡುಗಡೆ ಮಾಡಿದ ಅವರು ಮಂಗಳೂರು ಪೊಲೀಸ್ ಕಮೀಷನರ್ ಹರ್ಷ ಅಮಾನತು ಮಾಡುವಂತೆ ಒತ್ತಾಯಿಸಿದ್ದಾರೆ.
ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ವಿರುದ್ದ ಅಸಮಧಾನ ವ್ಯಕ್ತಪಡಿಸಿದ ಅವರು, 'ಮಂಗಳೂರಿನಲ್ಲಿರುವ "ಭಯಂಕರ ಸಮರ್ಥ" ಕಮೀಷನರ್ ಡಾ. ಹರ್ಷ ಹಾಗೂ ಅವರನ್ನು ರಕ್ಷಿಸಲು ಸರ್ಕಾರವೂ ಕಲ್ಲು ಸಂಗ್ರಹ ಮಾಡಿದ್ದಾರೆ ಎನ್ನುವ ಕಥೆ ಕಟ್ಟಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ 144 ಸೆಕ್ಷನ್ ಹಾಕುವುದೇ ಖುಷಿ. ಸ್ವಾತಂತ್ರ್ಯ ಹೋರಾಟದ ಸಮಯದಲ್ಲೂ ಬ್ರಿಟಿಷರು ಪ್ರತಿಭಟನೆಕಾರರನ್ನು ಹತ್ತಿಕ್ಕಲು ಈ ಮಟ್ಟದ ಪ್ರಯತ್ನ ಮಾಡಿರಲಿಕ್ಕಿಲ್ಲ' ಎಂದು ಕಿಡಿಕಾರಿದರು.