ನವದೆಹಲಿ, ಜ.10 (Daijiworld News/PY) : ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಇಂಟರ್ನೆಟ್ ಸೇವೆ ಸ್ಥಗಿತ ಹಾಗೂ ನಿರ್ಬಂಧದ ಬಗ್ಗೆ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಇಂಟರ್ನೆಟ್ ಸೇವೆ ಪಡೆಯುವುದು ಮೂಲಭೂತ ಹಕ್ಕಾಗಿದೆ ಹಾಗೂ ಇಂಟರ್ನೆಟ್ ಸೇವೆ, ಇ-ಬ್ಯಾಂಕಿಂಗ್ ಮತ್ತು ವ್ಯಾಪಾರ ವಹಿವಾಟು ಪುನರಾರಂಭಿಸುವಂತೆ ಶುಕ್ರವಾರ ಆದೇಶ ನೀಡಿದೆ.
ನ್ಯಾಯಮೂರ್ತಿಗಳಾದ ಎನ್ ವಿ ರಮಣ, ಆರ್ ಸುಭಾಷ್ ರೆಡ್ಡಿ ಮತ್ತು ಬಿ ಆರ್ ಗವೈ ಅವರನ್ನೊಳಗೊಂಡ ನ್ಯಾಯಪೀಠವು, ಒಂದು ವಾರದೊಳಗೆ ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಇಂಟರ್ನೆಟ್ ಸ್ಥಗಿತ ಹಾಗೂ ನಿರ್ಬಂಧ ಆದೇಶಗಳ ಬಗ್ಗೆ ಮರು ಪರಿಶೀಲಿಸಬೇಕು ಎಂದು ಆದೇಶ ನೀಡಿದ್ದು, ಇಂತಹ ನಿರ್ಬಂಧ ಅಲ್ಪಾವಧಿಗೆ ಮಾತ್ರ ಸೀಮಿತವಾಗಿರಬಹುದು, ಇದು ನ್ಯಾಯಾಂಗ ಪರಶೀಲನೆಗೆ ಒಳಪಡಲಿದೆ ಎಂದು ತಿಳಿಸಿದ್ದಾರೆ.
ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ಸಂವಿಧಾನ ವಿಧಿ 370ನ್ನು ರದ್ದುಪಡಿಸಿದ ನಂತರ ಕಣಿವೆ ಪ್ರದೇಶದಲ್ಲಿ ಇಂಟರ್ನೆಟ್ ಸೇವೆಗಳಿಗೆ ಹೇರಲಾಗಿದ್ದ ನಿರ್ಬಂಧಗಳ ಬಗ್ಗೆ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.
ವಿಧಿ 19ರೊಳಗೆ ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ಯ್ರದಲ್ಲಿ ಅಂತರ್ಜಾಲ ಹಕ್ಕು ಕೂಡಾ ಸೇರಿದೆ ಎಂದು ನ್ಯಾಯಮೂರ್ತಿ ಎನ್ ವಿ ರಮಣ ತಿಳಿಸಿದರು.