ಚಿಕ್ಕಬಳ್ಳಾಪುರ, ಜ.10 (Daijiworld News/PY) : "ಸಿಎಂ ಯಡಿಯೂರಪ್ಪ ಅವರು ಕೊಟ್ಟ ಮಾತಿಗೆ ಯಾವತ್ತೂ ತಪ್ಪಿದವರಲ್ಲ, ಇಂದಿಗೂ ಸಹ ಸಿಎಂ ಯಡಿಯೂರಪ್ಪ ಮಾತಿಗೆ ತಪ್ಪಲ್ಲ ಎಂದು ನಾನು ಭಾವಿಸಿದ್ದೇನೆ" ಎಂದು ಬಿಜೆಪಿ ಶಾಸಕ ಡಾ. ಸುಧಾಕರ್ ಹೇಳಿದ್ದಾರೆ.
ಗುರುವಾರ ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು, "ಮಂತ್ರಿ ಸ್ಥಾನ ನೀಡಲು ಸಿಎಂ ಒಳ್ಳೆಯ ಮುಹೂರ್ತ ಇಟ್ಟಿದ್ದಾರೆ, ಶುಭ ಗಳಿಗೆಯಲ್ಲಿ ಅಧಿಕಾರ ನೀಡಲು ನಿರ್ಧರಿಸಿದ್ದಾರೆ. ಈ ತೀರ್ಮಾನದಿಂದ ಕ್ಷೇತ್ರಕ್ಕೆ ಹಾಗೂ ರಾಜ್ಯಕ್ಕೆ ಶುಭವಾಗಲಿದೆ" ಎಂದರು.
"ಸಂಕ್ರಾತಿ ಕಳೆದ ಮೇಲೆ ಒಳ್ಳೆಯ ದಿನಗಳಿದ್ದು, ಸಂಕ್ರಾತಿಯ ಬಳಿಕ ಸಚಿವ ಸಂಪುಟ ವಿಸ್ತರಣೆಯಾಗಲಿದೆ, ಸೋತವರಿಗೆ ಮಂತ್ರಿ ಸ್ಥಾನ ನೀಡೋದು ನಾಯಕರ ನಿರ್ಧಾರ" ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸುಧಾಕರ್, "ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿರುವ ಸಂದರ್ಭ ಎಷ್ಟು ಬಾರಿ ಧರಣಿ ಕೂತಿದ್ದರು ಎಂಬುದನ್ನು ಜನ ತಿಳಿಸಲಿ, ನೆರೆ ಪರಿಹಾರಕ್ಕಾಗಿ ಎರಡು ಕಂತಲ್ಲಿ ಸುಮಾರು 3000 ಕೋಟಿ ಹಣ ಬಂದಿರುವ ವಿಚಾರದಲ್ಲಿ ಇದು ಬಿಡಿಗಾಸು ಎಂದು ಸಿದ್ದರಾಮಯ್ಯ ಅವರು ಹೇಳಿರುವ ಹೇಳಿಕೆ ಸರಿ ಇಲ್ಲ" ಎಂದು ಹೇಳಿದ್ದಾರೆ.