ಬೆಂಗಳೂರು, ಜ.10 (Daijiworld News/PY) : ರಾಜ್ಯ ಸರ್ಕಾರದ ಮುಜರಾಯಿ ಇಲಾಖೆಯ ವತಿಯಿಂದ ರಾಜ್ಯದ ಬಡ ಜನರಿಗೆ ನಡೆಯುವ ಉಚಿತ ವಿವಾಹದ ಯೋಜನೆಗೆ ಜ.10 ಶುಕ್ರವಾರ ವಿಧಾನ ಸೌಧದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಚಾಲನೆ ನೀಡಿದರು.
ರಾಜ್ಯ ಸರ್ಕಾರದ ಮುಜರಾಯಿ ಇಲಾಖೆಯ ವತಿಯಿಂದ ರಾಜ್ಯದ ಬಡ ಜನರಿಗೆ ನಡೆಯುವ ಉಚಿತ ವಿವಾಹದ ಯೋಜನೆ ಇದಾಗಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ಮಾನ್ಯ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಬಿಡುಗಡೆಗೊಳಿಸಿದರು.
ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಬಿಎಸ್ವೈ, "ಏಪ್ರಿಲ್ 26 ರಾಜ್ಯದ ಮುಜರಾಯಿ ಇಲಾಖೆಗೆ ಸೇರಿದ ವಿವಿಧ ಎ ದರ್ಜೆಯ ದೇವಾಲಯಗಳಲ್ಲಿ ಉಚಿತ ಸಾಮೂಹಿಕ ಮದುವೆ ನಡೆಯಲಿದೆ. ತಾಳಿ ಸಹಿತ ಚಿನ್ನಗಳು, ವಧುವಿಗೆ ಹತ್ತು ಸಾವಿರ ಹಾಗೂ ವರನಿಗೆ ಐದು ಸಾವಿರ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಸರ್ಕಾರದ ವತಿಯಿಂದಲೇ ನೀಡಲಾಗುತ್ತದೆ" ಎಂದು ತಿಳಿಸಿದರು.
ಮಾನ್ಯ ಮುಜರಾಯಿ ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರ ನೇತೃತ್ವದಲ್ಲಿ ಈ ಯೋಜನೆ ಜಾರಿಗೆ ಬಂದಿದ್ದು, ಇದರ ಸಂಪೂರ್ಣ ಮುತುವರ್ಜಿಯನ್ನು ಸಚಿವರು ವಹಿಸಲಿದ್ದಾರೆ. ಸಭೆಯಲ್ಲಿ ವಿವಿಧ ಶಾಸಕರು ಹಾಗೂ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.