ಶಿವಮೊಗ್ಗ, ಜ.10 (Daijiworld News/PY) : "ಮೋದಿ ಹಾಗೂ ಅಮಿತ್ ಶಾ ಅವರನ್ನು ರಾಷ್ಟ್ರದ ಜನರು ಎರಡು ಕಣ್ಣುಗಳಂತೆ ನೋಡುತ್ತಿದ್ದಾರೆ" ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರಪ್ಪ ಹೇಳಿದ್ದಾರೆ.
ನಗರದ ಬಸ್ ನಿಲ್ದಾಣದಲ್ಲಿ ಶುಕ್ರವಾರ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, "ಧರ್ಮದ ವಿಷಯದಲ್ಲಿ ಮುಸಲ್ಮಾನರು ಪಾಕಿಸ್ತಾನಕ್ಕೆ ಹೋಗಲಿ, ಹಿಂದೂಗಳು ಭಾರತದಲ್ಲಿರಲಿ ಎಂದು ಅಂಬೇಡ್ಕರ್ ಅವರೇ ಹೇಳಿದ್ದರು, ಆದರೆ ಮೋದಿಯವರು ದೇಶದಲ್ಲಿರುವ ಮುಸಲ್ಮಾನರನ್ನು ಜೊತೆಗೆ ತೆಗೆದುಕೊಂಡು ಹೋಗುವ ಕಾರ್ಯವನ್ನು ಮಾಡುತ್ತಿದ್ದಾರೆ" ಎಂದು ಹೇಳಿದರು.
"ಮೋದಿಯವರು ರಾಷ್ಟ್ರದ ಹಿತದೃಷ್ಟಿಯಿಂದ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಪೌರತ್ವ ಕಾಯ್ದೆಯಿಂದ ಮುಸಲ್ಮಾನರಿಗೆ ಯಾವುದೇ ತೊಂದರೆ ಇಲ್ಲ. ಚುನಾವಣೆಯಲ್ಲಿ ಸೋಲುಂಡ ಕಾಂಗ್ರೆಸ್ಸಿಗರ ಕುತಂತ್ರ ಈ ದೇಶದಲ್ಲಿ ನಡೆಯುತ್ತಿದೆ. ಎಷ್ಟೇ ಗೊಂದಲ ಸೃಷ್ಟಿ ಮಾಡಿದರೂ ಕಾಂಗ್ರೆಸ್ ಮತ್ತೆ ರಾಷ್ಟ್ರ ಹಾಗೂ ರಾಜ್ಯದಲ್ಲಿ ಅಧಿಕಾರಕ್ಕೆ ಬಾರದು. ಇನ್ನು ಮುಂದೆಯೂ ಮೋದಿಯವರೇ ಪ್ರಧಾನಿಯಾಗಿರುತ್ತಾರೆ" ಎಂದರು.
"ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಸಂದರ್ಭ ಪೌರತ್ವ ಕಾಯ್ದೆಯನ್ನು ಜಾರಿಗೆ ತರಲು ಮುಂದಾಗಿದ್ದರೂ ಸಹ ಸಾಧ್ಯವಾಗಿಲ್ಲ. ಈ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಮೋದಿಯವರು ಉತ್ತಮ ಕೆಲಸ ಮಾಡಿದ್ದಾರೆ" ಎಂದರು.