ಬೆಂಗಳೂರು, ಜ.10 (Daijiworld News/PY) : "ಶಾಂತವಾಗಿರುವ ರಾಜ್ಯ ಹಾಗೂ ಮಂಗಳೂರನ್ನು ಕುಮಾರಸ್ವಾಮಿ ಮತ್ತೆ ಕೆಣಕುತ್ತಿದ್ದಾರೆ" ಎಂದು ಗೃಹಸಚಿವ ಬಸವರಾಜ್ ಬೊಮ್ಮಾಯಿ ಅವರು ಹೇಳಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ್ ಬೊಮ್ಮಾಯಿ ಅವರು, "ಕುಮಾರಸ್ವಾಮಿ ಅವರು ಮಂಗಳೂರು ಹಿಂಸಾಚಾರಕ್ಕೆ ಸಂಬಂಧಿಸಿದ ವೀಡಿಯೋಗಳನ್ನು ಬಿಡುಗಡೆ ಮಾಡಿ ತಮ್ಮ ಬೇಜವ್ದಾರಿಯ ನಡವಳಿಕೆಯನ್ನು ತೋರಿಸುತ್ತಿದ್ದಾರೆ. ಇದೇ ಪೊಲೀಸರು ಕುಮಾರಸ್ವಾಮಿ ಸಿಎಂ ಆಗಿದ್ದ ಸಂದರ್ಭದಲ್ಲೂ ಇದ್ದರು. ಪೊಲೀಸರನ್ನು ತಪ್ಪಿತಸ್ಥರನ್ನಾಗಿ ಮಾಡುವುದು ಸರಿ ಅಲ್ಲ" ಎಂದು ಹೇಳಿದರು.
"ಕುಮಾರಸ್ವಾಮಿ ಬಿಡುಗಡೆ ಮಾಡಿದ ವಿಡಿಯೋ ಸರಿಯಿಲ್ಲ, ವೀಡಿಯೋದಲ್ಲಿ ಹಿಂದೆ ಇರೋದು ಮುಂದೆ, ಮುಂದೆ ಇರೋದು ಹಿಂದೆ ಹಾಕಿ ತೋರಿಸಿದ್ದಾರೆ. ಜನ ಸೇರಿದಾಗ, ಕಲ್ಲು ಎಸೆದಾಗ ಲಾಠಿ ಚಾರ್ಜ್ ಆಗಿದೆ. ಶಸ್ತ್ರಾಸ್ತ್ರ ಸಂಗ್ರಹಣೆ ಮಾಡಿದ್ದ ಸ್ಥಳಕ್ಕೆ ದಾಳಿ ಮಾಡಲು ಮುಂದಾದಾಗ ಗೋಲಿಬಾರ್ ನಡೆದಿದೆ. ಈ ಘಟನೆಯನ್ನು ತಿರುಚಲು ಈಗ ಕುಮಾರಸ್ವಾಮಿ ಮುಂದಾಗಿದ್ದಾರೆ" ಎಂದು ತಿಳಿಸಿದರು.
"ವೀಡಿಯೋವನ್ನು ಕುಮಾರಸ್ವಾಮಿ ಅವರು ಮ್ಯಾಜಿಸ್ಟ್ರಿಯಲ್ ತನಿಖೆಗೆ ನೀಡಲಿ, ಆ ವೀಡಿಯೋಗಳನ್ನು ಪರಿಶೀಲಿಸಿ ಎಂದು ನಾನು ಡಿಸಿಗೆ ಹೇಳಿದ್ದೇನೆ" ಎಂದು ಹೇಳಿದರು.
"ಕುಮಾರಸ್ವಾಮಿ ಅವರು ಜನರ ಮಧ್ಯೆ ಈಗ ಗೊಂದಲ ಸೃಷ್ಟಿಸಿರುವುದು ಸರಿಯಿಲ್ಲ, ಪೊಲೀಸರೇ ಪ್ರಚೋದನೆ ನೀಡಿದ್ದಾರೆ ಅಂತಾ ಕುಮಾರಸ್ವಾಮಿ ಅಂದಿದ್ದಾರೆ. ಈ ಹೇಳಿಕೆ ಸರಿಯಿಲ್ಲ, ಇದು ಬೇಜವಾಬ್ದಾರಿಯ ಹೇಳಿಕೆ. ಕುಮಾರಸ್ವಾಮಿ ಸಿಎಂ ಆಗಿದ್ದ ಸಂದರ್ಭ ಎಲ್ಲೆಲ್ಲಿ ಗಲಭೆ ನಡೆದಿದೆ, ಏನಾಗಿದೆ ಅಂತ ಎಲ್ಲರಿಗೂ ಗೊತ್ತು, ಮತ್ತಷ್ಟು ವೀಡಿಯೋ ಇದೆ ಎಂದು ಹೇಳಿದ್ದಾರೆ, ಆ ವೀಡಿಯೋಗಳನ್ನು ಸಹ ಕುಮಾರಸ್ವಾಮಿ ಬಿಡುಗಡೆ ಮಾಡಲಿ, ಒಬ್ಬ ಮಾಜಿ ಮುಖ್ಯಮಂತ್ರಿ ಹೀಗೆ ನಡೆದುಕೊಳ್ಳೋದು ಸರಿಯಿಲ್ಲ" ಎಂದು ಹೇಳಿದರು.