ನವದೆಹಲಿ, ಜ.10 (Daijiworld News/PY) : ಜೆಎನ್ಯುನಲ್ಲಿ ನಡೆದ ಹಿಂಸಾಚಾರವನ್ನು ವಿರೋಧಿಸಿ ಜೆಎನ್ಯು ವಿದ್ಯಾರ್ಥಿಗಳು ನಡೆಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ವಿರುದ್ದ ಟೀಕೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಈ ಮಧ್ಯೆ ದೀಪಿಕಾ ಪಡುಕೋಣೆ ವಿರುದ್ದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಹ ತಮ್ಮ ಟೀಕೆ ವ್ಯಕ್ತಪಡಿಸಿದ್ದಾರೆ.
ಚೆನ್ನೈನಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, "ಯಾರು ದೇಶವನ್ನು ಒಡೆಯುವ ಜನರಿದ್ದಾರೋ ಅವರ ಜೊತೆ ಕೈ ಜೋಡಿಸಲು ಮುಂದಾಗಿದ್ದಾರೆ, ದೇಶದಲ್ಲಿ ಸಿಆರ್ಪಿಎಫ್ ಯೋಧರನ್ನು ಹತ್ಯೆಗೈದಾಗ ಪ್ರತಿ ಬಾರಿ ಸಂಭ್ರಮಿಸುವ ಜನರ ಪರವಾಗಿದ್ದೀರಿ ಎಂಬುದು ತಿಳಿದಿದೆ" ಎಂದು ಹೇಳಿದರು.
"ತಾನು ಯಾವ ಜನರೊಂದಿಗೆ ನಿಂತಿದ್ದೇನೆ ಎಂಬುದು ಆಕೆಗೆ ತಿಳಿದಿದೆ. ಆಕೆಯ ಬೆಂಬಲ ಆಕೆಯ ಹಕ್ಕು. ನಾನು ಆಕೆಯ ಹಕ್ಕನ್ನು ನಿರಾಕರಿಸುವುದಿಲ್ಲ. ದೇಶದ ವಿನಾಶ ಬೇಕಿರುವ ಜನರೊಂದಿಗೆ ಅವರು ನಿಂತಿದ್ದಾರೆ. ಭಾರತ ತುಂಡಾಗಲಿ ಎಂದು ಹೇಳುವ ಜನರೊಂದಿಗೆ ಅವರು ನಿಂತಿದ್ದಾರೆ. ಪಡುಕೋಣೆ ರಾಜಕೀಯವಾಗಿ ಏನನ್ನು ಅಪೇಕ್ಷಿಸುತ್ತಿದ್ದಾರೆ ಎಂಬುದು ನನಗೆ ತಿಳಿಯಬೇಕು. 2011ರಲ್ಲಿ ದೀಪಿಕಾ ಪಡುಕೋಣೆ ಕಾಂಗ್ರೆಸ್ಗೆ ಬೆಂಬಲ ನೀಡಿದಾಗಲೇ ಆಕೆಯ ರಾಜಕೀಯ ಸಂಬಂಧ ಏನು ಎಂಬುದನ್ನು ತೋರಿಸಿಕೊಟ್ಟಿದ್ದರು" ಎಂದು ಸ್ಮೃತಿ ಇರಾನಿ ಹೇಳಿದರು.