ಲಕ್ನೋ, ಜ.10 (Daijiworld News/PY) : "ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ ವಿರೋಧ ನಡೆಯಲು ಕಾರಣವಾದ ಹಾಗೂ ಸಂವಿಧಾನಕ್ಕೆ ವಿರುದ್ದವಾದ ಸಿಎಎ ಹಾಗೂ ಎನ್ಆರ್ಸಿ ಕಾಯ್ದೆಯನ್ನು ಜಾರಿಗೊಳಿಸುವುದಿಲ್ಲ" ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ಸಿಎಎ ವಿರುದ್ಧವಾಗಿ ಪ್ರತಿಭಟನೆ ನಡೆಸಿ ಬಂಧಿತರಾಗಿ ಬಳಿಕ ಜಾಮೀನಿನ ಮೇರೆಗೆ ಬಿಡುಗಡೆಯಾಗಿರುವ ಕಾರ್ಯಕರ್ತರನ್ನು ಭೇಟಿಯಾದ ಬಳಿಕ ಮಾತನಾಡಿದ ಅವರು, "ದೇಶದ ಸಂವಿಧಾನಕ್ಕೆ ವಿರುದ್ಧವಾದ ಕಾನೂನಿನ ಅನುಷ್ಠಾನದ ವಿರುದ್ಧ ಸಾವಿರಾರು ಜನರು ಬೀದಿಗಿಳಿಯಲಿದ್ದಾರೆ" ಎಂದರು.
"ಸಿಎಎ ವಿರುದ್ದವಾದ ಪ್ರತಿಭಟನೆಯಿಂದಾಗಿ ಜೈಲಿಗೆ ಹಾಕುವ ಹಾಗೂ ಗಂಭೀರ ಪ್ರಕರಣಗಳಲ್ಲಿ ಹಲ್ಲೆಗೊಳಗಾಗುವ ಕಾರ್ಯಕರ್ತರಿಗೆ ನೆರವು ನೀಡುವ ಸಲುವಾಗಿ ಕಾಂಗ್ರೆಸ್ ಪಕ್ಷದ ಕಾನೂನು ಘಟಕವೊಂದನ್ನು ಸ್ಥಾಪಿಸಲಿದೆ" ಎಂದು ತಿಳಿಸಿದರು.
ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಪ್ರತಿಭಟನೆಯಿಂದಾಗಿ 15 ದಿನಗಳ ಕಾಲ ಜೈಲಿನಲ್ಲಿದ್ದ ಹೋರಾಟಗಾರರಾದ ಏಕ್ತಾ ಶೇಖರ್ ಸಿಂಗ್ ಹಾಗೂ ಅವರ ಪತಿ ರವಿ ಶೇಕರ್ ಅವರನ್ನು ಭೇಟಿಯಾದ ಪ್ರಿಯಾಂಕಾ ಗಾಂಧಿ, 18 ತಿಂಗಳ ಮಗುವನ್ನು ದೂರ ಮಾಡಿ ಈ ದಂಪತಿಯನ್ನು ಜೈಲಿಗೆ ಹಾಕಲಾಗಿತ್ತು. ಆದರೆ, ದೇಶಕ್ಕಾಗಿ ಅವರು ಹೋರಾಟ ನಡೆಸಿದ್ದರಿಂದ ನನಗೆ ಸಂತೋಷವಾಗಿದೆ ಎಂದು ಹೇಳಿದರು.