ಬೆಂಗಳೂರು, ಜ 10 (DaijiworldNews/SM): ಮಂಗಳೂರು ಗಲಭೆಗೆ ಸಂಬಂಧಿಸಿದಂತೆ ಮಾಜಿ ಸಿಎಂ ಕುಮಾರಸ್ವಾಮಿ ವೀಡಿಯೋ ಬಿಡುಗಡೆಗೊಳಿಸುವ ಮೂಲಕ ಪೊಲೀಸ್ ಇಲಾಖೆಗೆ ಕೌಂಟರ್ ಹೊಡೆದಿದ್ದಾರೆ. ಆದರೆ, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಂಸದೆ ಶೋಭಾ ಕರಂದ್ಲಾಜೆ, ಇದೊಂದು ಕಟ್ ಆಂಡ್ ಪೇಸ್ಟ್ ಸಿಡಿಯಾಗಿದೆ ಎಂಬುವುದಾಗಿ ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಯವರು ಸಿಡಿ ಪ್ರಿಯರಾಗಿದ್ದಾರೆ. ಆರೇಳು ವರ್ಷಗಳಿಂದ ಅನೇಕ ಬಾರಿ ಅವರು ಸಿಡಿಗಳನ್ನು ಬಿಡುಗಡೆ ಮಾಡಿದ್ದಾರೆ. ಆದರೆ ಅವರು ಬಿಡುಗಡೆಗೊಳಿಸಿರುವ ಸಿಡಿಗಳನ್ನು ಇದುವರೆಗೂ ತಾರ್ಕಿಕವಾಗಿ ಕೊನೆಗಾಣಿಸಲು ಅವರಿಂದ ಸಾಧ್ಯವಾಗಿಲ್ಲ.
ಮಂಗಳೂರು ಗಲಭೆ ನಡೆದು ಹಲವು ದಿನಗಳಾಗಿದೆ. ಆದರೆ, ಸಿಡಿ ಬಿಡುಗಡೆಗೊಳಿಸಲು ಇಷ್ಟೊಂದು ಸಮಯ ಯಾಕೆ ತೆಗೆದುಕೊಂಡಿದ್ದಾರೆ ಎಂದು ಅವರು ಪ್ರಶ್ನಿಸಿದ್ದಾರೆ. ಷಡ್ಯಂತ್ರದಿಂದ ಕೂಡಿರುವ ಈ ಸಿಡಿಯನ್ನು ವಿಧಿವಿಜ್ಞಾನ ಪ್ರಯೋಗದಲ್ಲಿ ಪರೀಕ್ಷೆ ನಡೆಸಬೇಕಾಗಿದೆ. ಹಾಗೂ ಇದರ ಕುರಿತಾದ ಸತ್ಯಾಸತ್ಯತೆಗಳನ್ನು ಬಹಿರಂಗಗೊಳಿಸುವ ಅಗತ್ಯತೆ ಇದೆ ಎಂದರು. ಪೊಲೀಸರನ್ನು ನೈತಿಕವಾಗಿ ಕುಗ್ಗಿಸುವ ಕೆಲಸ ಮಾಜಿ ಸಿಎಂ ಮಾಡುತ್ತಿದ್ದಾರೆ. ಕುಮಾರಸ್ವಾಮಿಯವರು ಜವಾಬ್ದಾರಿ ಮರೆತು ವರ್ತಿಸುತ್ತಿದ್ದಾರೆ ಎಂದರು.