ಬೆಂಗಳೂರು, ಜ.11 (Daijiworld News/PY) : ಹಿರಿಯ ಸಂಶೋಧಕ, ಸಾಹಿತಿ ಡಾ. ಎಂ.ಚಿದಾನಂದಮೂರ್ತಿ(88) ಅವರ ನಿಧನಕ್ಕೆ ಸಿಎಂ ಯಡಿಯೂರಪ್ಪ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಚಿಂದಾನಂದ ಮೂರ್ತಿ ಅವರ ಪಾರ್ಥಿವ ಶರೀರವನ್ನು ಮನೆಗೆ ಸ್ಥಳಾಂತರಿಸಲಾಗಿದ್ದು, ಅನೇಕ ಗಣ್ಯರು, ಸಂಬಂಧಿಕರು, ಗೆಳೆಯರು ಚಿಮೂ ಮನೆಗೆ ಆಗಮಿಸಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ವಿದೇಶದಿಂದ ಸಂಬಂಧಿಕರು ಹಾಗೂ ಸ್ನೇಹಿತರು ಆಗಮಿಸುವ ಹಿನ್ನೆಲೆ, ಚಿದಾನಂದಮೂರ್ತಿಯವರ ಅಂತ್ಯಸಂಸ್ಕಾರವನ್ನು ಜ.12 ಭಾನುವಾರದಂದು ನಡೆಸುವುದಾಗಿ ಅವರ ಕುಟುಂಬಸ್ಥರು ನಿರ್ಧರಿಸಿದ್ದಾರೆ.
ಸುತ್ತೂರು ಮಠದ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿಗಳು ಅಂತಿಮ ದರ್ಶನಕ್ಕೆ ಬರುವ ಹಿನ್ನೆಲೆ, ಜ.12 ಭಾನುವಾರ ಬೆಳಿಗ್ಗೆ 11 ಗಂಟೆಗೆ ಅಂತಿಮ ವಿಧಿ ವಿಧಾನ ಮಾಡಲು ತೀರ್ಮಾನ ಮಾಡಲಾಗಿದೆ.
ಇತಿಹಾಸಜ್ಞ ಕೂಡಾ ಆಗಿದ್ದ ಚಿಮೂಗೆ ಹಂಪಿಯ ಜೊತೆ ವಿಶಿಷ್ಟ ನಂಟು ಇದ್ದು, ತನ್ನ ಕೊನೆಯ ಪಯಣ ಹಂಪಿಯಲ್ಲೇ ಆಗಲಿ ಎಂದು ಚಿಮೂ ಬಯಕೆ ವ್ಯಕ್ತಪಡಿಸಿದ್ದರು. ಹಾಗಾಗಿ ಹಂಪಿ ವಿವಿಯಲ್ಲಿ ಅನುಮತಿ ಸಿಕ್ಕರೆ ಅಲ್ಲೇ ಅಂತ್ಯಸಂಸ್ಕಾರ-ಸಮಾಧಿ ಮಾಡಲು ಚಿಂತನೆ ನಡೆಸುತ್ತಿದ್ದಾರೆ. ಅನುಮತಿ ಸಿಗದಿದ್ದರೆ ಚಾಮರಾಜಪೇಟೆಯಲ್ಲೇ ಅಂತ್ಯಸಂಸ್ಕಾರ ನೇರವೇರಿಸುತ್ತಾರೆ. ಹೀಗಾಗಿ ಈ ಕುರಿತು ಕುಟುಂಬಸ್ಥರು ಸರ್ಕಾರದ ಜೊತೆ ಮಾತುಕತೆ ನಡೆಸುತ್ತಿದ್ದಾರೆ.
ವೀರಶೈವ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳನ್ನು ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದು. ಸುಮನಹಳ್ಳಿಯ ಹಿಂದೂ ರುದ್ರ ಭೂಮಿಯಲ್ಲಿ ಅಂತಿಮ ವಿಧಿ ವಿಧಾನ ನಡೆಸುವ ಸಾದ್ಯತೆ ಇದೆ ಎನ್ನಲಾಗುತ್ತಿದೆ.