ಬಳ್ಳಾರಿ, ಜ 11(Daijiworld News/MSP): ಪಕ್ಕೆಲುಬು ಪದ ಸರಿಯಾಗಿ ಉಚ್ಚರಿಸಲಾಗದೇ ವಿದ್ಯಾರ್ಥಿ ಪದೇ ಪದೇ ಅದೇ ಪದವನ್ನು ಹೇಳುವಂತೆ ಒತ್ತಾಯಿಸುತ್ತಾ ಥಳಿಸಿ, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದ ಶಿಕ್ಷಕ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಸೇವೆಯಿಂದ ಅಮಾನತುಗೊಂಡ ಶಿಕ್ಷಕನನ್ನು ಬಳ್ಳಾರಿಯ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಟಿ. ಚಂದ್ರಶೇಖರಪ್ಪ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಮಾತ್ರವಲ್ಲದೇ ಶಾಲಾ ಸಮಯದ ಅವಧಿಯಲ್ಲಿ ಮೊಬೈಲ್ ಫೋನ್ ಬಳಸಬಾರದೆನ್ನುವ ನಿಯಮ ಉಲ್ಲಂಘನೆಯಾಗಿರುವ ಕಾರಣ ಮುಖ್ಯ ಶಿಕ್ಷಕರಿಗೂ ನೋಟೀಸ್ ಜಾರಿ ಮಾಡಲಾಗುವುದು ಎಂದು ತಿಳಿದುಬಂದಿದೆ.
ಪಕ್ಕೆಲುಬು ಪದ ಸರಿಯಾಗಿ ಉಚ್ಚರಿಸಲಾಗದ ೨ನೇ ತರಗತಿಯ ವಿದ್ಯಾರ್ಥಿಯನ್ನು ಪದೇ ಪದೇ ಅದೇ ಪದವನ್ನು ಹೇಳುವಂತೆ ಒತ್ತಾಯಿಸುತ್ತಾ ಶಿಕ್ಷಕ ಕಪಾಳಕ್ಕೆ ಹೊಡೆದಿರುವ ಹಾಗೂ ಕಣ್ಣೀರಿಡುತ್ತಾ ಭಯದಿಂದ ಪದವನ್ನು ಉಚ್ಚರಿಸಿಲು ಪ್ರಯತ್ನಿಸಿಸುವ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸೈಬರ್ ಕ್ರೈಂ ಠಾಣೆ ದೂರು ನೀಡಿ, ಸಂಬಂಧಪಟ್ಟ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಅವರಿಗೆ ಪತ್ರಬರೆದಿದ್ದರು.