ನವದೆಹಲಿ, ಜ 11 (Daijiworld News/MB) : ಜೆಎನ್ಯುವಿನಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಷೆ ಘೋಷ್ ಶಂಕಿತ ಆರೋಪಿ ಎಂದು ಪೊಲೀಸರು ಹೇಳಿದ ಬೆನ್ನಲ್ಲೇ ಐಷೆ ಘೋಷ್ ಪೊಲೀಸರಿಗೆ ಸವಾಲು ಹಾಕಿದ್ದು, "ನಾನು ತಪ್ಪು ಮಾಡಿಲ್ಲ, ನನ್ನ ಮೇಲೆ ನಡೆದ ದಾಳಿಯ ಬಗ್ಗೆ ನನ್ನಲ್ಲಿ ಸಾಕಷ್ಟು ಪುರಾವೆಗಳಿವೆ. ಆದರೆ ಪೊಲೀಸರು ಪಕ್ಷಪಾತಿಗಳು. ನಾನು ನೀಡಿದ ದೂರಿಗೆ ಎಫ್ಐಆರ್ ದಾಖಲು ಮಾಡಲೇ ಇಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಪೆರಿಯಾರ್ ಹಾಸ್ಟೆಲ್ನಲ್ಲಿ ನಡೆದ ಹಿಂಸಾಚಾರದಲ್ಲಿ ನಾನು ಭಾಗಿಯಾಗಿರಲಿಲ್ಲ. ಪೊಲೀಸರು ನಾನು ಭಾಗಿಯಾಗಿರುವ ಸಾಕ್ಷಿ ತೋರಿಸಲಿ. ಈ ಕುರಿತು ದೆಹಲಿ ಪೊಲೀಸರು ತನಿಖೆ ಮಾಡಲಿ. ನಾನು ಯಾವುದೇ ತಪ್ಪನ್ನು ಮಾಡಿಲ್ಲ ಹಾಗಾಗಿ ಹೆದರುವ ಪ್ರಶ್ನೆಯೇ ಇಲ್ಲ, ಹೋರಾಟ ಮುಂದುವರೆಸುತ್ತೇನೆ" ಎಂದು ಹೇಳಿದ್ದಾರೆ.
"ಸಾಬರಮತಿ ಹಾಸ್ಟೆಲ್ ಬಳಿ ನನ್ನ ಮೇಲೆ ಮುಸುಕು ಹಾಕಿದ ದುಷ್ಕರ್ಮಿಗಳು ಹೇಗೆ ದಾಳಿ ಮಾಡಿದ್ದಾರೆ ಎನ್ನುವುದಕ್ಕೆ ಎಲ್ಲಾ ಪುರಾವೆಗಳಿವೆ. ಎಚ್ಆರ್ಡಿ ಸಚಿವಾಲಯಕ್ಕೆ ಈ ಹಿಂಸಾಚಾರದ ಕುರಿತು ಎಲ್ಲಾ ಮಾಹಿತಿಗಳನ್ನು ನಾವು ನೀಡಿದ್ದೇವೆ. ಕುಲಪತಿಯವರ ಮೇಲೆ ನಂಬಿಕೆ ಇಲ್ಲ" ಎಂದಿದ್ದಾರೆ.
"ಈ ವಿವಾದ ತಿಳಿಯಾಗುವ ಭರವಸೆ ಇದೆ. ದೇಶದ ಕಾನೂನು ವ್ಯವಸ್ಥೆ ಮೇಲೆ ಸಂಪೂರ್ಣ ನಂಬಿಕೆ ಇದೆ. ನನಗೆ ನ್ಯಾಯ ಸಿಗುವ ವಿಶ್ವಾಸವಿದೆ" ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಕಳೆದ ವಾರ ಹಾಸ್ಟೆಲ್ ಶುಲ್ಕ ಹೆಚ್ಚಳ ವಿರೋಧ ಮಾಡಿ ಜೆಎನ್ಯುವಿನಲ್ಲಿ ದಾಂಧಲೆ ನಡೆಸಿ ಸರ್ವರ್ ರೂಂ ಜಖಂ ಮಾಡಿದ್ದು ಈ ಗುಂಪಿನಲ್ಲಿ ಐಷೆ ಘೋಷ್ ಕೂಡಾ ಇದ್ದರು ಎಂದು ಪೊಲೀಸರು ಆರೋಪ ಮಾಡಿದ್ದು ಜೆಎನ್ಯುವಿನಲ್ಲಿ ನಡೆದ ಹಿಂಸಾಚಾರಕ್ಕೆ ಸಂಭಂದಿಸಿ ಪೊಲೀಸರು ಶಂಕಿತರ ಚಿತ್ರ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ವಿದ್ಯಾರ್ಥಿ ನಾಯಕಿ ಐಷೆ ಘೋಷ್ ಸೇರಿದಂತೆ ಒಟ್ಟು 9 ಶಂಕಿತ ದಾಳಿಕೋರರ ಚಿತ್ರ ಬಿಡುಗಡೆ ಮಾಡಿದೆ. ಚುಂಚುನ್ ಕುಮಾರ್, ಪಂಕಜ್ ಮಿಶ್ರಾ, ವಾಸ್ಕರ್ ವಿಜಯ್, ಸುಚೇತಾ ತಾಲುದ್ಕರ್, ಪ್ರಿಯಾ ರಂಜನ್, ಡೋಲನ್ ಸಾವಂತ್, ಯೋಗೇಂದ್ರ ಭಾರದ್ವಾಜ್, ವಿಕಾಸ್ ಪಟೇಲ್ ಇತರ ಶಂಕಿತ ಆರೋಪಿಗಳು. ಈ ಪೈಕಿ ವಿಕಾಸ್ ಪಟೇಲ್, ಯೋಗೇಂದ್ರ ಭಾರದ್ವಾಜ್ ಎಬಿವಿಪಿಯ ಸದಸ್ಯರೆಂದು ಹೇಳಲಾಗುತ್ತಿದ್ದು ಭಾರದ್ವಾಜ್ 'ಯುನಿಟಿ ಅಗೇನೆಸ್ಟ್ ಲೆಫ್ಟ್' ವಾಟ್ಸ್ಆ್ಯಪ್ ಗ್ರೂಪ್ನ ಆಡ್ಮಿನ್ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ.