ಕೊಚ್ಚಿ, ಜ 11(Daijiworld News/MSP): ಕೇರಳದ ಕೊಚ್ಚಿಯ ಮರಡುವಿನಲ್ಲಿರುವ 60 ಮೀಟರ್ ಎತ್ತರದ 19 ಅಂತಸ್ತಿನ ಬೃಹತ್ ಅಪಾರ್ಟ್ ಮೆಂಟ್ ವೊಂದು ಜನವರಿ 11 ರ ಶನಿವಾರ ಬೆಳಿಗ್ಗೆ 11.18 ಕ್ಕೆ ಗಡಿಯಾರ ಮುಳ್ಳುಗಳು ಬಡಿದಂತೆ ಸೆಕೆಂಡುಗಳಲ್ಲಿ ನೆಲಕ್ಕಪ್ಪಳಿಸುವ ಮೂಲಕ ದ್ವಂಸಗೊಂಡಿದೆ.
ಸುಪ್ರೀಂ ಕೋರ್ಟ್ ಕೇರಳ ಸರ್ಕಾರಕ್ಕೆ ಆದೇಶ ನೀಡಿದ ಹಿನ್ನಲೆಯಲ್ಲಿ ಹೋಲಿ ಫೈತ್ ಹೆಚ್ ಹೆಸರಿನ ಅಪಾರ್ಟ್ ಮೆಂಟ್ ಅನ್ನು ಮುಂಬೈ ಮೂಲದ ಎಡಿಫೈಸ್ ಎಂಜಿನಿಯರಿಂಗ್ ಸಂಸ್ಥೆ ನೆಲಸಮ ಮಾಡಿದೆ. ಕಟ್ಟಡ ನಿರ್ಮಾಣದಲ್ಲಿ ಪರಿಸರ ನಿಯಮಗಳನ್ನು ಉಲ್ಲಂಘಿಸಿ, ನದಿ ತೀರದಲ್ಲಿ ಕಟ್ಟಡ ನಿರ್ಮಾಣ ಮಾಡಿದ್ದಕ್ಕಾಗಿ ಸುಪ್ರೀಂ 138 ದಿನಗಳೊಳಗೆ ಈ ಅಪಾರ್ಟ್ ಮೆಂಟನ್ನು ನೆಲಸಮ ಮಾಡಬೇಕೆಂದು ಕಳೆದ ವರ್ಷ ಸಪ್ಟೆಂಬರ್ ನಲ್ಲಿ ಸುಪ್ರೀಂ ಕೋರ್ಟ್ ಕೇರಳ ಸರ್ಕಾರಕ್ಕೆ ಆದೇಶಿಸಿತ್ತು.
ನೆಲಸಮ ದೃಶ್ಯವನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಸ್ಪೋಟಕಗಳನ್ನು ಬಳಸಿ ಶನಿವಾರ 4 ಕಟ್ಟಡಗಳನ್ನು ನೆಲಸಮಗೊಳಿಸಲಾಯಿತು.
ಕಟ್ಟಡಗಳನ್ನು ನೆಲಸಮಗೊಳಿಸಲು 212.4 ಕೆಜಿ ಸ್ಫೋಟಕಗಳನ್ನು ಬಳಸಲಾಗಿತ್ತು, ಇವುಗಳನ್ನು ಆರು ಮಹಡಿಗಳಲ್ಲಿ ಇರಿಸಲಾಗಿತ್ತು, ಪಕ್ಕದಲ್ಲೆ ಸರೋವರ ಹಾಗೂ ಸೇತುವೆ ಇರುವ ಕಾರಣ ಇವುಗಳಿಗೆ ಯಾವುದೇ ಹಾನಿ ಆಗದಂತೆ ದ್ವಂಸಗೊಳಿಸಬೇಕಾದ ಜವಬ್ದಾರಿ ಸಂಸ್ಥೆಯ ಮೇಲಿತ್ತು.
ಬೆಳಿಗ್ಗೆ 10.45 ರ ಸುಮಾರಿಗೆ ಮೊದಲ ಸೈರನ್ ಮೂಲಕ ನೆಲಸಮಗಿಳಿಸುವ ಪ್ರಕ್ರಿಯೆ ಪ್ರಾರಂಭವಾಯಿತು. ಬೆಳಿಗ್ಗೆ 11.10 ಕ್ಕೆ ಎರಡನೇ ಸೈರನ್ ಹೊರಟ ತಕ್ಷಣ, ಸ್ಥಳೀಯ ಹತ್ತಿರದ ರಾಷ್ಟ್ರೀಯ ಹೆದ್ದಾರಿ ಯುದ್ದಕ್ಕೂ ಹತ್ತಿರದ ಎಲ್ಲಾ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಯಿತು. ಆ ಬಳಿಕ 11.16 ಕ್ಕೆ ಮೂರನೇ ಸೈರನ್ ಹೊರಟ ತಕ್ಷಣ, ಕೆಲವೇ ಸೆಕೆಂಡುಗಳಲ್ಲಿ ಕಟ್ಟಡವನ್ನು ಉರುಳಿಸಲಾಯಿತು.
ಅಪಾರ್ಟ್ಮೆಂಟ್ ಬಳಿ ಇರುವ ಕುಂದನೂರ್ ಸೇತುವೆಯ ಸುರಕ್ಷತೆಯ ಬಗ್ಗೆ ಆತಂಕಗಳು ಎದ್ದ ಕಾರಣ , ಕಟ್ಟಡ ನೆಲಸಮದ ನೌಕಾಪಡೆಯ ಹೆಲಿಕಾಪ್ಟರ್ ಮೇಲ್ವಿಚಾರಣೆ ನಡೆಸುತ್ತಿತ್ತು.