ಮೀರತ್, ಜ.11 (Daijiworld News/PY) : ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳನ್ನು ಜ.22ರಂದು ಗಲ್ಲಿಗೇರಿಸುವ ಜವಾಬ್ದಾರಿಯನ್ನು ಉತ್ತರಪ್ರದೇಶ ಸರ್ಕಾರ ಪವಾನ್ ಜಲ್ಲಾಡ್ಗೆ ವಹಿಸಿದ್ದು, ನಿರ್ಭಯಾ ಅಪರಾಧಿಗಳನ್ನು ಗಲ್ಲಿಗೇರಿಸಿದರೆ, ನನಗೆ ಸರ್ಕಾರ 1 ಲಕ್ಷ ರೂ.ಗಳನ್ನು ನೀಡುತ್ತದೆ. ಈ ಹಣ ನನ್ನ ಮಗಳ ಮದುವೆಗೆ ಬೇಕು ಎಂದು ಪವನ್ ಜಲ್ಲಾಡ್ ತಿಳಿಸಿದ್ದಾರೆ.
ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳ ಮರಣದಂಡನೆಯ ಆಡಳಿತವನ್ನು ಉತ್ತರಪ್ರದೇಶ ಜೈಲು ವಹಿಸಿಕೊಂಡದ್ದಕ್ಕಾಗಿ ಪವನ್ ಜಲ್ಲಾಡ್ ದೇವರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಹಲವು ತಿಂಗಳಿನಿಂದ ನಾನು ಈ ಅವಕಾಶಕ್ಕಾಗಿ ಕಾಯುತ್ತಾ ಇದ್ದೆ, ಕೊನೆಗೂ ದೇವರಿಗೆ ನನ್ನ ಮೊರೆ ಕೇಳಿಸಿದೆ( ಭಗವಾನ್ ನೇ ಮೇರಿ ಸುನ್ ಹೀ ಲೀ) ಎಂದು ಹೇಳಿದ್ದಾರೆ.
ಮೀರತ್ ಅಡಳಿತವು ಕಾನ್ಶಿರಾಮ್ ಯೋಜನೆಯಡಿ ನೀಡಿದ್ದ ಒಂದು ಕೊಠಡಿಯ ಮನೆಯಲ್ಲಿ ವಾಸವಿರುವ ಜಲ್ಲದ್ಗೆ ಯುಪಿ ಪೊಲೀಸರು ಜಿಲ್ಲೆಯ ಹೊರಗೆ ಹೋಗದಂತೆ ಎಚ್ಚರಿಕೆ ನೀಡಿದ್ದಾರೆ.
ನನ್ನನ್ನು ಜ.22ಕ್ಕೆ ಸಿದ್ದಪಡಿಸುತ್ತಿದ್ದಾರೆ. ಮುಂಬರುವ ಯಾವುದೇ ದಿನಗಳಲ್ಲಿ ನನ್ನನ್ನು ತಿಹಾರ್ ಜೈಲಿಗೆ ಕರೆದೊಯ್ಯುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲವು ಸುಗಮವಾಗಿ ನಡೆಯುವಂತೆ ನಾನು ಸಾಕಷ್ಟು ಪೂರ್ವಾಭ್ಯಾಸ ಮಾಡಿದ್ದೇನೆ. ಇದಕ್ಕಾಗಿ ನಾನು ಮುಂಚಿತವಾಗಿ ಹೋಗಬೇಕಾಗುತ್ತದೆ ಎಂದು ಮೀರತ್ನ ಭೂಮಿಯಾಪುಲ್ ಪ್ರದೇಶದ ಲಕ್ಷ್ಮಣ್ ಕುಮಾರ್ ಕುಟುಂಬದ ನಾಲ್ಕನೇ ತಲೆಮಾರಿನ ಜಲ್ಲಾಡ್ ಪವನ್ ಹೇಳಿದ್ದಾರೆ.
ಯುಪಿ ಜೈಲು ಆಡಳಿತವು ನನಗೆ ಕೇವಲ ತಿಂಗಳಿಗೆ 5 ಸಾವಿರ ರೂ.ನೀಡುತ್ತದೆ. ನನಗೆ ಹಣ ಗಳಿಸುವ ಯಾವುದೇ ಮೂಲಗಳಿಲ್ಲ, ಮರಣದಂಡನೆಯನ್ನು ವಿಧಿಸುವುದರ ಮೂಲಕ ಮಾತ್ರ ನಾನು ನನ್ನ ಜೀವನವನ್ನು ನಡೆಸಬಹುದಾಗಿದೆ ಎಂದು ತಿಳಿಸಿದ್ದಾರೆ.
ನನ್ನ ಮಗಳು ಮದುವೆ ಪ್ರಾಯಕ್ಕೆ ಬಂದಿದ್ದಾಳೆ. ಆದರೆ ಆಕೆಯ ಮದುವೆ ಮಾಡಿಸಲು ನನ್ನ ಬಳಿ ಹಣವಿಲ್ಲ, ನನ್ನ ಪೂರ್ವಜರ ಮನೆ ಶಿಥಿಲಾವಸ್ಥೆಯಲ್ಲಿದೆ ಅದರ ರಿಪೇರಿಗೂ ನನ್ನ ಬಳಿ ಹಣವಿಲ್ಲ. ನಾನು ಈಗಾಗಲೇ ಸಾಲದಲ್ಲಿದ್ದೇನೆ. ಸಾಲಗಾರರು ನನ್ನನ್ನು ಹಣ ನೀಡುವಂತೆ ಕೇಳುತ್ತಿದ್ದಾರೆ. ಈ ಹಣ ನನಗೆ ಹೊಸ ಜೀವನ ನೀಡಲಿದೆ ಎಂದು ಹೇಳಿದ್ದಾರೆ.
ನಿರ್ಭಯಾ ಅಪರಾಧಿಗಳನ್ನು ಗಲ್ಲಿಗೇರಿಸುವುದಕ್ಕಾಗಿ ಸರ್ಕಾರ ನೀಡುವ ಹಣದ ಬಗ್ಗೆ ಹೇಳಿದ ಪವನ್, ಪ್ರತಿ ಮರಣದಂಡನೆಯ ವೇಳೆ ಗಲ್ಲಿಗೇರಿಸುವಾತನಿಗೆ 25 ಸಾವಿರ ರೂ. ಸಿಗುತ್ತದೆ. ನಾಲ್ಕು ಮರಣದಂಡನೆ ಅಪರಾಧಿಗಳು ಇರುವುದರಿಂದ ನನಗೆ 1 ಲಕ್ಷ ರೂ ಸಿಗುತ್ತದೆ. ಇದು ನನಗೆ ದೊಡ್ಡ ಮೊತ್ತವೇ ಸರಿ. ಈ ಹಿಂದೆ ನನ್ನ ಅಜ್ಜ ಕಲುರಾಮ್ ಅಪರಾಧಿಗಳನ್ನು ಗಲ್ಲಿಗೇರಿಸುತ್ತಿದ್ದರು ಆ ವೇಳೆ ಅವರಿಗೆ ಕೇವಲ 200 ರೂ. ಮಾತ್ರ ನೀಡಲಾಗುತ್ತಿತ್ತು ಎಂದು ತಿಳಿಸಿದರು.