ನವದೆಹಲಿ, ಜ.11 (Daijiworld News/PY) : ತನ್ನ ಗೆಳೆಯನನ್ನು ಮಧ್ಯಪ್ರದೇಶದ ಮೆಡಿಕಲ್ ವಿಶ್ವವಿದ್ಯಾನಿಲಯಕ್ಕೆ ಉಪ ಕುಲಪತಿಯನ್ನಾಗಿ ನೇಮಿಸುವಂತೆ ರಾಜ್ಯಪಾಲ ಲಾಲ್ಜಿ ಟಂಡನ್ ಅವರಿಗೆ ತಾನು ಕೇಂದ್ರ ಸಚಿವ ಅಮಿತ್ ಶಾ ಎಂದು ಹೇಳಿ ದೂರವಾಣಿ ಕರೆ ಮಾಡಿದ್ದ ಭಾರತೀಯ ವಾಯು ಸೇನೆಯ ಹಿರಿಯ ಅಧಿಕಾರಿಯೋರ್ವರನ್ನು ಮಧ್ಯಪ್ರದೇಶದ ಸ್ಪೆಷಲ್ ಟಾಸ್ಕ್ ಪೋರ್ಟ್ ಬಂಧಿಸಿರುವ ಘಟನೆ ಶುಕ್ರವಾರ ನಡೆದಿದೆ.
ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಕುಲ್ ದೀಪ್ ಬಾಘೇಲಾ ಪ್ರಸ್ತುತ ದೆಹಲಿಯ ಐಎಎಫ್ ಕೇಂದ್ರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಬಾಘೇಲ್ ತಾನು ಶಾ ಎಂದು ಗವರ್ನರ್ಗೆ ದೂರವಾಣಿ ಕರೆ ಮಾಡಿದ್ದು ಅಲ್ಲದೇ, ತನ್ನ ಸ್ನೇಹಿತನನ್ನು ಶಾ ಅವರ ಅವರ ಖಾಸಗಿ ಕಾರ್ಯದರ್ಶಿ ಎಂದು ಸುಳ್ಳು ಹೇಳಿದ ಹಿನ್ನೆಲೆ ಬಾಘೇಲ್ ಹಾಗೂ ಭೋಪಾಲ್ ಮೂಲದ ದಂತವೈದ್ಯ ಚಂದ್ರೇಶ್ ಕುಮಾರ್ ಶುಕ್ಲಾ ಅವರನ್ನು ಬಂಧಿಸಿದ್ದಾರೆ.
ಜಬಾಲ್ಪುರ್ ಮೂಲದ ಮಧ್ಯಪ್ರದೇಶದ ಮೆಡಿಕಲ್ ಸೈನ್ಸ್ ವಿಶ್ವವಿದ್ಯಾನಿಲಯಕ್ಕೆ ಗೆಳೆಯ ಶುಕ್ಲಾನನ್ನು ಉಪ ಕುಲಪತಿಯನ್ನಾಗಿ ನೇಮಿಸುವಂತೆ ಶಿಫಾರಸು ಮಾಡಿ ಗವರ್ನರ್ಗೆ ಭಾಘೇಲಾ ಕರೆ ಮಾಡಿದ್ದ ಎಂದು ಎಸ್ಟಿಎಫ್ನ ಹೆಚ್ಚುವರಿ ಡೈರೆಕ್ಟರ್ ಜನರಲ್ ತಿಳಿಸಿರುವುದಾಗಿ ವರದಿಯಾಗಿದೆ.
ಶುಕ್ಲಾ ಮಧ್ಯಪ್ರದೇಶದ ಮೆಡಿಕಲ್ ಸೈನ್ಸ್ ವಿಶ್ವವಿದ್ಯಾನಿಲಯದ ಉಪ ಕುಲಪತಿ ಹುದ್ದೆಯ ಆಕಾಂಕ್ಷಿಯಾಗಿದ್ದ. ಅಲ್ಲದೇ ಉಪ ಕುಲಪತಿ ಹುದ್ದೆಗೆ ನೇಮಕಾತಿ ಆರಂಭಗೊಂಡಿತ್ತು. ತಾನು ಉಪಕುಲಪತಿಯಾಗಬೇಕೆಂಬ ಹಂಬಲವನ್ನು ಶುಕ್ಲಾ ತನ್ನ ಗೆಳೆಯನಾದ ಬಾಘೇಲಾ ಬಳಿ ತಿಳಿಸಿದ್ದ. ಈ ಉದ್ದೇಶದಿಂದ ಹಿರಿಯ ರಾಜಕೀಯ ಮುಖಂಡರ ಹೆಸರಿನಲ್ಲಿ ದೂರವಾಣಿ ಕರೆ ಮಾಡಿ ಮಧ್ಯಪ್ರದೇಶದ ಮೆಡಿಕಲ್ ಸೈನ್ಸ್ ವಿಶ್ವವಿದ್ಯಾನಿಲಯಕ್ಕೆ ಉಪ ಕುಲಪತಿಯನ್ನಾಗಿ ಶಿಫಾರಸು ಮಾಡುವಂತೆ ಶುಕ್ಲಾ ಕೇಳಿಕೊಂಡಿದ್ದ ಎಂದು ಎಡಿಜಿ ತಿಳಿಸಿದ್ದಾರೆ.
ಈ ವಿಚಾರವಾಗಿ ಇಬ್ಬರು ಸಂಚು ನಡೆಸಿ ಶುಕ್ಲಾ ತಾನು ಕೇಂದ್ರ ಗೃಹ ಸಚಿವ ಶಾ ಖಾಸಗಿ ಕಾರ್ಯದರ್ಶಿ ಎಂದು ಹೇಳಿ ಗವರ್ನರ್ ಲಾಲ್ಜಿ ಟಂಡನ್ ಅವರಿಗೆ ಕರೆ ಮಾಡಿ, ಬಾಘೇಲಾ ಅಮಿತ್ ಶಾ ಎಂದು ಹೇಳಿ ಮಾತನಾಡಿ, ಶುಕ್ಲಾ ಹೆಸರನ್ನು ಉಪಕುಲಪತಿಗೆ ಶಿಫಾರಸು ಮಾಡುವಂತೆ ಕೇಳಿಕೊಂಡಿದ್ದ ಎಂದು ವರದಿ ತಿಳಿಸಿದೆ.