ಶಿವಮೊಗ್ಗ, ಜ.11 (Daijiworld News/PY) : ರಾಜ್ಯ ಧಾರ್ಮಿಕ ಪರಿಷತ್ ಅನ್ನು ಮುಂದಿನ 15 ದಿನದೊಳಗೆ ರಚನೆ ಮಾಡಲಾಗುತ್ತದೆ, ರಾಜ್ಯದ 30 ಜಿಲ್ಲೆಗಳಲ್ಲಿಯೂ ಜಿಲ್ಲಾ ಧಾರ್ಮಿಕ ಪರಿಷತ್ ಇರಲಿದೆ ಎಂದು ರಾಜ್ಯ ಮೀನುಗಾರಿಕೆ ಹಾಗೂ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಶನಿವಾರ ಶಿವಮೊಗ್ಗದಲ್ಲಿ ಮಾತನಾಡಿದ ಅವರು, ದೇವಾಲಯಗಳಿಗೆ ಆಡಳಿತಾತ್ಮಕ ವ್ಯವಸ್ಥಾಪನಾ ಸಮಿತಿಯನ್ನು ಜಿಲ್ಲಾ ಧಾರ್ಮಿಕ ಪರಿಷತ್ ಮೂಲಕ ರಚಿಸಲಾಗುವುದು. ರಾಜ್ಯದ ಹಲವು ಕಡೆಗಳಲ್ಲಿ ದೇವಾಲಯಗಳ ಜಾಗ ಒತ್ತುವರಿಯಾಗಿದೆ. ಅದನ್ನು ತೆರವುಗೊಳಿಸಲು ಸರ್ವೇ ಪ್ರಕ್ರಿಯೆಯನ್ನೂ ಪ್ರಾರಂಭ ಮಾಡಲಾಗುತ್ತದೆ ಎಂದು ತಿಳಿಸಿದರು.
ಮೀನುಗಾರಿಕಾ ಇಲಾಖೆಯಲ್ಲಿರುವ 28 ಸಾವಿರ ಫಲಾನುಭವಿಗಳಿಗೆ ಕ್ರೆಡಿಟ್ ಕಾರ್ಡ್ ನೀಡಲಾಗುತ್ತದೆ. ಈಗಾಗಲೇ ಸಾಂಕೇತಿಕವಾಗಿ 3 ಮೀನುಗಾರರಿಗೆ ಪ್ರಧಾನಿಗಳು ಕ್ರೆಡಿಟ್ ಕಾರ್ಡ್ ವಿತರಿಸಿದ್ದಾರೆ. ರೈತರು ಹೇಗೆ ಕ್ರೆಡಿಟ್ ಕಾರ್ಡ್ ಬಳಸಿ ವ್ಯವಹಾರ ಮಾಡುತ್ತಾರೋ ಅದೇ ರೀತಿ ಮೀನುಗಾರರಿಗೆ ಕ್ರೆಡಿಟ್ ಕಾರ್ಡ್ ಬಳಸಿ ವ್ಯವಹಾರ ಮಾಡಬಹುದು ಎಂದು ಹೇಳಿದರು.
ಸ್ವಸಹಾಯ ಹಾಗೂ ರಾಷ್ಟ್ರೀಯ ಬ್ಯಾಂಕುಗಳಲ್ಲಿ 23 ಸಾವಿರ ಮಹಿಳೆಯರು ಮಾಡಡಿರುವ 50 ಸಾವಿರ ರೂ ಸಾಲಮನ್ನ ಮಾಡಲಾಗಿದೆ. ಒಟ್ಟು 60 ಕೋಟಿ ರೂ ಮೀನುಗಾರಿಕೆ ಮಹಿಳೆಯರ ಸಾಲಮನ್ನ ಮಾಡಲಾಗಿದೆ ಎಂದು ತಿಳಿಸಿದರು.
ಮಂಗಳೂರು ಗಲಭೆಗೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಿಡಿ ಬಿಡುಗಡೆ ವಿಚಾರವನ್ನು ಮಾತನಾಡಿದ ಅವರು, ಕುಮಾರಸ್ವಾಮಿಯವರು ಸಂಪೂರ್ಣ ಸಿಡಿಯನ್ನು ಏಕೆ ಬಿಡುಗಡೆ ಮಾಡಿಲ್ಲ ಎಂದು ಆತಂಕವಾಗುತ್ತಿದೆ. ಅವರು ಸಿಎಂ ಆಗಿದ್ದ ಸಂದರ್ಭ ನಾನು ವಿಪಕ್ಷ ನಾಯಕನಾಗಿ ಕಾರ್ಯ ನಿರ್ವಹಿಸುತ್ತಿದ್ದೆ. ಸಮಾಜದ ಶಾಂತಿ-ಸುವ್ಯವಸ್ಥೆ ಕಾಪಾಡುವುದು ಆಡಳಿತ ಹಾಗೂ ವಿಪಕ್ಷದ ಜವಾಬ್ದಾರಿ ಎಂದು ಕುಮಾರಸ್ವಾಮಿ ಅವರೇ ಹೇಳಿದ್ದರು ಎಂದರು.
ಕುಮಾರಸ್ವಾಮಿ ಅವರ ಪ್ರಕಾರ ಮುಗ್ಧರು, ಅಮಾಯಕರಲ್ಲಿ ಕಲ್ಲು ಹೊಡೆದೋರು ಬರುತ್ತಾರಾ. ಅಮಾಯಕರು ಶಸ್ತ್ರಾಗಾರದ ಬೀಗ ಒಡೆದು, ಪೊಲೀಸರ ಮೇಲೆ ಕಲ್ಲು ತೂರಾಟ ಮಾಡುತ್ತಾರಾ. ಮಾಜಿ ಸಿಎಂ ಆಗಿ ಆಡಳಿತ ನಡೆಸಿದವರು ಹೀಗೆ ಹೇಳುವುದು ಸರಿಯಲ್ಲ. ಅವರ ಗೊಂದಲ ಬಗೆಹರಿಸಲು ನ್ಯಾಯಾಂಗ ತನಿಖೆ ಮಾಡಲಾಗುತ್ತಿದೆ. ಯಾರೇ ತಪ್ಪು ಮಾಡಿದ್ದರೂ ಅವರ ವಿರುದ್ಧ ಸರ್ಕಾರ ಕ್ರಮಕೈಗೊಳ್ಳಲಿದೆ ಎಂದು ಹೇಳಿದರು.