ಬೆಂಗಳೂರು, ಜ.11 (Daijiworld News/PY) : ''ಜನವರಿ 13ರಂದು ಕನಕಪುರ ಚಲೋ ಹೆಸರಿನಲ್ಲಿ ಕೋಮುಸಾಮರಸ್ಯ ಹಾಳು ಮಾಡಿ, ಗಲಭೆ, ಹಿಂಸಾಚಾರಕ್ಕೆ ಪ್ರೇರಣೆ ನೀಡುವುದು ಮತೀಯ ಶಕ್ತಿಗಳ ಹುನ್ನಾರವಾಗಿದೆ'' ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ಅವರು "ಶತ-ಶತಮಾನಗಳಿಂದಲೂ ಕನಕಪುರದ ಮಹಾಜನರು ಶಾಂತಿಪ್ರಿಯರು. ಮತೀಯ ಸಾಮರಸ್ಯಕ್ಕೆ ಹೆಸರಾದವರು. ಜಾತಿ, ಮತ, ಧರ್ಮದ ಭೇದವಿಲ್ಲದೆ ಸಹೋದರಭಾವದಿಂದ ಬದುಕಿದವರು, ಬದುಕುತ್ತಿರುವವರು. ಕೋಮುಸೌಹಾರ್ದತೆಯಲ್ಲಿ ಇಡೀ ನಾಡಿಗೆ ಮಾದರಿಯಾದವರು. ಇಂತಹ ಶಾಂತಿ, ಸ್ನೇಹಪ್ರಿಯರನ್ನು ಕೆಣಕಲು ಸಾಧ್ಯವಿಲ್ಲ" ಎಂದು ತಿಳಿಸಿದರು.
"ಯಾವುದೇ ಅಹಿತಕರ ಘಟನೆಗಳಿಗೆ ಕಿವಿ ಕೊಡಬೇಡಿ. ಕನಕಪುರದ ಜನತೆ ಮತೀಯ ಶಕ್ತಿಗಳ ವಿರುದ್ಧ ಒಗ್ಗಟ್ಟಿನಿಂದ ನಿಲ್ಲುತ್ತಾರೆ, ಕೋಮುಶಕ್ತಿಗಳ ಯಾವುದೇ ಪ್ರೇರಣೆ, ಹುನ್ನಾರಗಳಿಗೂ ಬಲಿಯಾಗುವುದಿಲ್ಲ. ಭ್ರಾತೃತ್ವವನ್ನು ಎತ್ತಿ ಹಿಡಿಯುತ್ತಾರೆ, ಸಾಮರಸ್ಯ, ಸೌಹಾರ್ದತೆ ಕಾಪಾಡುತ್ತಾರೆಂಬ ವಿಶ್ವಾಸ, ನಂಬಿಕೆ ನನ್ನದು. ನಾವೆಲ್ಲರೂ ಶಾಂತಿಯಿಂದಲೇ ಕೋಮುಶಕ್ತಿಗಳ ಸಂಚನ್ನು ಹಿಮ್ಮೆಟ್ಟಿಸೋಣ" ಎಂದು ಹೇಳಿದ್ದಾರೆ.