ನವದೆಹಲಿ, ಜ.11 (Daijiworld News/PY) : "ಪೌರತ್ವ ತಿದ್ದುಪಡಿ ಕಾಯ್ದೆಯು ತಾರತಮ್ಯದಿಂದ ಕೂಡಿದ್ದು, ದೇಶವನ್ನು ಧರ್ಮದ ಆಧಾರದ ಮೇಲೆ ವಿಭಜಿಸುವ ಉದ್ದೇಶ ಹೊಂದಿದೆ" ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.
ಶನಿವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಮಾತನಾಡಿದ ಸೋನಿಯಾ ಗಾಂಧಿ ಅವರು, "ನೂತನ ಪೌರತ್ವ ತಿದ್ದುಪಡಿ ಕಾಯ್ದೆಯು ವಿಭಜನೆ ಹಾಗೂ ತಾರತಮ್ಯದ ಕಾನೂನಾಗಿದೆ. ದೇಶದ ಜನರನ್ನು ಧರ್ಮದ ಆಧಾರದ ಮೇಲೆ ವಿಭಜಿಸುವ ಕೆಟ್ಟ ಉದ್ದೇಶವನ್ನು ಈ ಕಾನೂನು ಹೊಂದಿದೆ" ಎಂದರು.
"ಹೊಸ ಪೌರತ್ವ ಕಾನೂನಿನ ಅನುಷ್ಠಾನದಿಂದ ಆಗುವ ಗಂಭೀರ ಹಾನಿಯನ್ನು ಸಾವಿರಾರು ಯುವಕ-ಯುವತಿಯರು ಹಾಗೂ ವಿದ್ಯಾರ್ಥಿಗಳು ಅರಿತುಕೊಂಡಿದ್ದಾರೆ. ಈ ಕಾರಣದಿಂದಾಗಿ ಇಂದು ದೇಶದಾತ್ಯಂತ ಸಿಎಎ ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿವೆ. ಸಿಎಎ ವಿರುದ್ಧದ ಘಟನೆಗಳಿಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ಆಯೋಗವನ್ನು ರಚಿಸಿ ಸಮಗ್ರ ತನಿಖೆ ನಡೆಸಬೇಕು, ನೊಂದವರಿಗೆ ನ್ಯಾಯ ಒದಗಿಸಬೇಕು" ಎಂದು ಹೇಳಿದರು.
"ಜಮ್ಮು ಮತ್ತು ಕಾಶ್ಮೀರದ ಜನರಿಗೆ ತಮ್ಮ ಮೂಲಭೂತ ಹಕ್ಕುಗಳನ್ನು ನಿರಾಕರಿಸುತ್ತಿರುವುದು ದುಃಖ ಹಾಗೂ ಕಳವಳಕಾರಿ ವಿಚಾರವಾಗಿದೆ. ಆದರೆ, ಸರ್ಕಾರ ಮಾತ್ರ ಪರಿಸ್ಥಿತಿ ಸಾಮಾನ್ಯವಾಗಿದೆ ಎಂದು ಅರ್ಥವಾಗದ ವಾದ ಮಾಡುತ್ತಿದೆ" ಎಂದು ತಿಳಿಸಿದರು.