ಬೆಂಗಳೂರು, ಜ.11 (Daijiworld News/PY) : "ಭೈರಪ್ಪ ಅವರ ಬರವಣಿಗೆ ಅದ್ಭುತ. ಆದರೆ ಅವರು ಯಾವಾಗ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಗೊತ್ತಿಲ್ಲ. ರಾಜ್ಯಸಭೆಗೆ ಹೋಗುವ ಆಸೆ ಇರಬೇಕು" ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಹೇಳಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಭೈರಪ್ಪ ಅವರು ಯಾವಾಗ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಗೊತ್ತಿಲ್ಲ, ಅವರಿಗೆ ರಾಜ್ಯಸಭೆಗೆ ಹೋಗಲು ಆಸೆ ಇರಬೇಕು ಅದಕ್ಕಾಗಿ ಬಿಜೆಪಿಯನ್ನು ಹೊಗಳಿ ಮಾತನಾಡುತ್ತಿದ್ದಾರೆ" ಎಂದು ಹೇಳಿದರು.
"ಕಾಂಗ್ರೆಸ್ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಎನ್ನುವ ವಿಚಾರವನ್ನು ಭೈರಪ್ಪ ಅವರು ತಿಳಿದುಕೊಳ್ಳಬೇಕು. ಇಳಿ ವಯಸ್ಸಿನಲ್ಲಿ ಯಾಕೆ ನಿಮ್ಮ ವ್ಯಕ್ತಿತ್ವಕ್ಕೆ ಮಸಿ ಬಳಿದುಕೊಳ್ಳಲು ಹೊರಟಿದ್ದೀರಿ" ಎಂದರು.
"ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಒಂದು ದಿನಕ್ಕೆ ಸೀಮಿತಗೊಳಿಸುವ ಮೂಲಕ ಕನ್ನಡಿಗರಿಗೆ ಬಿಜೆಪಿ ವಂಚನೆ ಮಾಡಿದೆ. ವಿಠಲ ಹೆಗ್ಡೆ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ಕೀಳುಮಟ್ಟಕ್ಕೆ ಇಳಿದಿದೆ" ಎಂದು ಹೇಳಿದರು.
"ಶಾಸಕ ಸೋಮಶೇಖರ ರೆಡ್ಡಿ ಅವರು ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಅವರ ಮೇಲಿನ ಕೇಸ್ ವಾಪಸ್ ಪಡೆಯಲು ಹೇಳುತ್ತಿರುವ ಮುಖ್ಯಮಂತ್ರಿಯವರಿಗೆ ನಾಚಿಕೆ ಆಗಬೇಕು" ಎಂದಿದ್ದಾರೆ.