ಕೋಲ್ಕತ್ತಾ, ಜ.12 (Daijiworld News/MB) : ನಾನು ಮತ್ತೊಮ್ಮೆ ಸಾರಿ ಹೇಳುತ್ತೇನೆ, ಪೌರತ್ವ ತಿದ್ದುಪಡಿ ಕಾಯ್ದೆ ನಿಮ್ಮ ಪೌರತ್ವವನ್ನು ಕಿತ್ತುಕೊಳ್ಳುವುದಿಲ್ಲ ಪೌರತ್ವ ನೀಡುತ್ತದೆ. ವಿರೋಧ ಪಕ್ಷಗಳು ಉದ್ದೇಶಪೂರ್ವಕವಾಗಿ ಸಿಎಎ ಬಗ್ಗೆ ತಿಳಿಯಲು ನಿರಾಕರಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇಂದು ಕೋಲ್ಕತ್ತಾದ ಬೇಲೂರು ಮಠದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಸಿಎಎ ಕಾಯ್ದೆಯನ್ನು ನಾವು ರಾತ್ರಿ ಹಗಲಾಗುವಾಗ ಜಾರಿ ಮಾಡಲಿಲ್ಲ. . ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಈ ತಿದ್ದುಪಡಿ ಕಾಯ್ದೆ ಮಂಡಿಸಿ ಅಲ್ಲಿ ಅಂಗೀಕಾರ ದೊರೆತ ನಂತರವೇ ಜಾರಿ ಮಾಡಿದ್ದು. ಈ ಕುರಿತು ಯುವಕರಿಗೆ ತಪ್ಪು ಮಾಹಿತಿ ನೀಡಲಾಗುತ್ತಿದೆ. ಯುವ ಜನತೆಗೆ ಈ ಕಾಯ್ದೆಯ ಕುರಿತು ಅರ್ಥ ಮಾಡಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
ರಾಜಕೀಯವನ್ನು ಮುಂದಿಟ್ಟುಕೊಂಡು ಇರುವವರು ಉದ್ದೇಶಪೂರ್ವಕವಾಗಿಯೇ ಸಿಎಎ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡುವುದಿಲ್ಲ. ಪಾಕಿಸ್ತಾನದಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾಗುವ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ನೀಡಬೇಕೆಂದು ಭಾರತಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ ಮಹಾತ್ಮಾಗಾಂಧಿ ಮತ್ತು ಇತರ ನಾಯಕರು ಹೇಳಿದ್ದಾರೆ. ಇಂದು ಪಾಕಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಅನುಭವಿಸುತ್ತಿರುವ ಕಿರುಕುಳದ ಕುರಿತು ಸಿಎಎಯಿಂದಾಗಿ ನಮಗೆ ತಿಳಿದು ಬರುತ್ತದೆ. ಹಾಗಾಗಿ ವಿರೋಧ ಪಕ್ಷದವರು ಅವರ ರಾಜಕೀಯ ಲಾಭವನ್ನು ಗಮನದಲ್ಲಿಟ್ಟುಕೊಂಡು ಈ ಕಾಯ್ದೆಯನ್ನು ವಿರೋಧ ಮಾಡುತ್ತಿದ್ದಾರೆ. ಅವರ ಪಕ್ಷದ ನಾಯಕರೇ ಸಿಎಎ ಬೇಕೆಂದು ಪ್ರತಿಪಾದನೆ ಮಾಡಿದ್ದರು, ಇಂದು ಅವರೇ ಅದನ್ನು ವಿರೋಧಿಸುವ ಮೂಲಕ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು.
ನನಗೆ ಶಕ್ತಿಶಾಲಿ, ಉತ್ಸಾಹಿ 100 ಯುವಕರನ್ನು ಕೊಡಿ, ದೇಶವನ್ನು ಬದಲಾಯಿಸುತ್ತೇನೆ ಎಂದು ವಿವೇಕಾನಂದರು ಹೇಳಿದ್ದ ಮಾತುಗಳನ್ನು ಸ್ಮರಿಸಿದ ಪ್ರಧಾನಿ ಮೋದಿ ಭಾರತದಲ್ಲಿ ಯಾವುದೇ ಬದಲಾವಣೆ ಆಗಬೇಕಾದರೆ ನಮ್ಮಲ್ಲಿ ಶಕ್ತಿ ಉತ್ಸಾಹ ಅತೀ ಮುಖ್ಯವಾಗಿ ಇರಬೇಕು. ಸ್ವಾಮಿ ಸ್ವಾಮಿ ವಿವೇಕಾನಂದರ ಶ್ರೇಷ್ಠ ಮಾತುಗಳನ್ನು ನಾವು ಸ್ಮರಿಸಿ ನವ ಭಾರತದ ಉದಯ ಮತ್ತು ಬೆಳವಣಿಗೆಗಾಗಿ ಅವರ ಮಾತುಗಳಂತೆ ನಡೆಯುವುದು ಮುಖ್ಯವಾಗಿದೆ ಎಂದು ಹೇಳಿದರು.