ಬೆಂಗಳೂರು, ಜ.12 (Daijiworld News/MB) : ಕಾಂಗ್ರೆಸ್ ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಯ್ಕೆಯನ್ನು ಚುರುಕುಗೊಳಿಸಿದ್ದು ಈ ವಿಚಾರದಲ್ಲಿ ಚರ್ಚೆ ಮಾಡಲು ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಗೆ ಕರೆದಿದ್ದು ಸೋಮವಾರ ಸಂಜೆ ಸಿದ್ದರಾಮಯ್ಯ ಅವರು ದೆಹಲಿಗೆ ತೆರಳಲಿದ್ದಾರೆ.
ಹೈಕಮಾಂಡ್ ಈಗಾಗಲೇ ತಮ್ಮ ಆಪ್ತ ಪರಮೇಶ್ವರ್ ಅವರಿಂದ ಗುಪ್ತವಾಗಿ ವರದಿ ಪಡೆದುಕೊಂಡಿದ್ದು ಈಗ ಸಿದ್ಧರಾಮಯ್ಯ ಅವರನ್ನು ಚರ್ಚೆ ನಡೆಸಲು ಕರೆದಿದೆ. ಹಾಗಾಗಿ ವಿಪಕ್ಷ ನಾಯಕನ ಸ್ಥಾನದಲ್ಲಿ ಸಿದ್ಧರಾಮಯ್ಯ ಅವರೇ ಮುಂದುವರೆಯುವ ಸಾಧ್ಯತೆ ಹೆಚ್ಚಾಗಿದ್ದು ಇವರನ್ನು ಹೈಕಮಾಂಡ್ ದೆಹಲಿಗೆ ಕರೆದಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಸಿದ್ದರಾಮಯ್ಯ ಬಣದಲ್ಲಿ ಎಂಬಿ ಪಾಟೀಲ್ ಅಥವಾ ಕೃಷ್ಣಭೈರೇಗೌಡ ಅವರನ್ನು ಕೆಪಿಸಿಸಿ ಅಧ್ಯಕ್ಷನಾಗಿ ಮಾಡಬೇಕು ಎಂಬ ಮಾತು ಕೇಳಿಬರುತ್ತಿದ್ದು ಮೂಲ ಕಾಂಗ್ರೆಸ್ಸಿಗರಾದ ಮಾಜಿ ಸಚಿವ ಡಿ.ಕೆ ಶಿವಕುಮಾರ್, ಮಾಜಿ ಕೇಂದ್ರ ಸಚಿವ ಮುನಿಯಪ್ಪ, ಹರಿಪ್ರಸಾದ್, ರಾಮಲಿಂಗಾರೆಡ್ಡಿ ಕೂಡಾ ಆಕಾಂಕ್ಷಿಗಳಾಗಿದ್ದಾರೆ. ಇದರ ಜೊತೆ ನಾನು ಆಕಾಂಕ್ಷಿ ಎಂದು ಸತೀಶ್ ಜಾರಕಿಹೋಳಿ ಹೇಳಿದ್ದಾರೆ.