ಯಾದಗಿರಿ, ಜ.12 (Daijiworld News/PY) : "ದಲಿತರು ಸಿಎಂ ಆಗಬೇಕಾದರೆ ಅದು ಬಿಜೆಪಿಯಿಂದಲೇ ಸಾಧ್ಯ. ಬೇರೆ ಪಕ್ಷದಲ್ಲಿ ಸಾಧ್ಯವಿಲ್ಲ "ಎಂದು ಶಾಸಕ ರಾಜುಗೌಡ ಹೇಳಿದ್ದಾರೆ.
ಯಾದಗಿರಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಯಡಿಯೂರಪ್ಪ ಅವರ ಅಧಿಕಾರದ ಅವಧಿ ಮುಗಿದ ಬಳಿಕ ಬಿಜೆಪಿ ಪಕ್ಷದಲ್ಲಿ ದಲಿತರಿಗೆ ಸಿಎಂ ಸ್ಥಾನ ದೊರಕಲಿದೆ, ದಲಿತರು ಸಿಎಂ ಆಗಬೇಕಾದರೆ ಅದು ಬಿಜೆಪಿಯಿಂದ ಸಾಧ್ಯ, ಬೇರೆ ಪಕ್ಷದಿಂದ ಆಗುವುದಿಲ್ಲ, ಈಗ ನಾವೆಲ್ಲ ಶಾಸಕರಾಗಿದ್ದು ಸಿಎಂ ಬಿಎಸ್ವೈ ಅವರ ಹೆಸರಿನಲ್ಲಿ" ಎಂದು ಹೇಳಿದರು.
"ದಲಿತರಿಗೆ ಬಿಜೆಪಿಯಿಂದಲೇ ಉತ್ತಮ ಸ್ಥಾನಮಾನ ದೊರಕಲು ಸಾಧ್ಯ. ದಲಿತರ ಹೆಸರಿನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ದಲಿತರ ಅಭಿವೃದ್ಧಿಯ ಬಗ್ಗೆ ಕಾಳಜಿ ತೋರಿಸಿಲ್ಲ. ಕಾಂಗ್ರೆಸ್ ಸಂಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬಂದರೂ ದಲಿತರಿಗೆ ಸಿಎಂ ಹಾಗೂ ಡಿಸಿಎಂ ಸ್ಥಾನವನ್ನು ನೀಡಿಲ್ಲ" ಎಂದು ತಿಳಿಸಿದರು.
"ಹಲವಾರು ವರ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದಾರೆ. ಆದರೆ ದುಡಿದವರಿಗೆ ಸಿಎಂ ಸ್ಥಾನ ಕೊಟ್ಟಿಲ್ಲ. ಜಿ.ಪರಮೇಶ್ವರ್ ಅವರಿಗೆ ಸಮ್ಮಿಶ್ರ ಸರ್ಕಾರದಲ್ಲಿ ಅನಿವಾರ್ಯ ಪರಿಸ್ಥಿತಿಯಲ್ಲಿ ಡಿಸಿಎಂ ಸ್ಥಾನ ನೀಡಿದ್ದಾರೆ. ಆದರೆ 2013ರಲ್ಲಿಯೇ ಪರಮೇಶ್ವರ್ ಅವರಿಗೆ ಕಾಂಗ್ರೆಸ್ ಸಿಎಂ ಮಾಡಿಲ್ಲ" ಎಂದು ಹೇಳಿದ್ದಾರೆ.