ರಾಯಚೂರು, ಜ.12 (Daijiworld News/PY) : "ಕಾಂಗ್ರೆಸ್ಸಿನವರು ಸೋಲಿನಿಂದ ಕಂಗೆಟ್ಟಿದ್ದಾರೆ. ಮೋದಿಯನ್ನ ವಿರೋಧ ಮಾಡುತ್ತಾ ದೇಶದ ವಿರುದ್ಧ ಮಾತಾಡುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಪಾಕಿಸ್ತಾನದ ಭಾಷೆ ಒಂದೇ ಆಗಿದೆ" ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ರಾಯಚೂರಿನಲ್ಲಿ ಆಯೋಜಿಸಿರುವ ಸಿಎಎ ಜಾಗೃತಿ ಜಾಥ ಆರಂಭಕ್ಕೂ ಮುನ್ನ ಮಾತನಾಡಿದ ಅವರು, "ಕಾಂಗ್ರೆಸ್ಸಿಗರು ಸೋಲಿನಿಂದ ಕಂಗೆಟ್ಟಿದ್ದಾರೆ. ಪ್ರಧಾನಿ ಮೋದಿ ಅವರನ್ನು ವಿರೋಧ ಮಾಡುತ್ತಾ ದೇಶದ ವಿರುದ್ದವಾಗಿ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಪಾಕಿಸ್ತಾನದ ಭಾಷೆ ಒಂದೇ ಆಗಿದೆ. ಪಾಕಿಸ್ತಾನವನ್ನು ಬೆತ್ತಲೆ ಮಾಡುವ ಅವಕಾಶಕ್ಕೆ ಯಾಕೆ ವಿರೋಧಿಸುತ್ತೀರಿ" ಎಂದು ಕೇಳಿದರು.
"ಪಾಕಿಸ್ತಾನದ ಭಯೋತ್ಪಾದನೆ ಮುಖವನ್ನು ವಿಶ್ವದ ಮುಂದೆ ನಿಲ್ಲಿಸುವ ಕಾರ್ಯ ಯಶಸ್ವಿಯಾಗಿ ನಡೆದಿದೆ. ಪಾಕ್ನಲ್ಲಿ ಅಸಹಿಷ್ಣುತೆ ಹಾಗೂ ಸರ್ಕಾರ ಅಲ್ಪ ಸಂಖ್ಯಾತರ ಮೇಲಿನ ನಡೆಸಿರುವ ಧಾರ್ಮಿಕ ಅತ್ಯಾಚಾರವನ್ನು ಜಗತ್ತಿಗೆ ತೋರಿಸಲು ಅವಕಾಶ ಇದೆ. ಆದರೆ ಕಾಂಗ್ರೆಸ್ಸಿಗರು ಸಿಎಎ ವಿರೋಧಿಸಿ ಹೋರಾಟ ಮಾಡುತ್ತಿದ್ದಾರೆ" ಎಂದು ಹೇಳಿದರು.
"ಮಾಜಿ ಸಚಿವ ಯು.ಟಿ ಖಾದರ್ ಅವರೇ, ನಿಮ್ಮ ಉದ್ದೇಶ ಏನು ಅನ್ನೋದನ್ನ ಸ್ಪಷ್ಟಪಡಿಸಬೇಕು. ಸಿಎಎ ಬಿಲ್ ಬಂದ ನಂತರ ನಿಮಗೆ ಏನಾದರೂ ತೊಂದರೆಯಾಗಿದೆಯಾ. ಯಾವ ಅಲ್ಪಸಂಖ್ಯಾತರನ್ನು ಪಾಕಿಸ್ತಾನ ಸುರಕ್ಷಿತವಾಗಿ ನೋಡಿಕೊಂಡಿದೆ. ಇದು ಪೌರತ್ವ ಕೊಡಲು ಇರುವ ಕಾನೂನೇ ಹೊರತು ಕಿತ್ತುಕೊಳ್ಳುವ ಕಾನೂನು ಅಲ್ಲ" ಎಂದರು.
ಕುಮಾರಸ್ವಾಮಿ ಸಿ.ಡಿ ಬಿಡುಗಡೆ ಬಗ್ಗೆ ಮಾತನಾಡಿದ ಜೋಶಿ ಅವರು, "ಈ ಬಗ್ಗೆ ಸಿಎಂ ಹಾಗೂ ಪೊಲೀಸ್ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಕುಮಾರಸ್ವಾಮಿಯವರದ್ದು ಹಿಟ್ ಆ್ಯಂಡ್ ರನ್ ನಡೆ. ಪೊಲೀಸರು ಪರಿಸ್ಥಿತಿಗೆ ಅನುಗುಣವಾಗಿ ಸರಿಯಾದ ಕ್ರಮ ತೆಗೆದುಕೊಂಡಿದ್ದಾರೆ. ಪೊಲೀಸರು ತೆಗೆದುಕೊಂಡ ನಿರ್ಧಾರದ ವಿರುದ್ದಾಗಿ ಮಾತನಾಡುವುದು ಸರಿಯಲ್ಲ" ಎಂದು ಹೇಳಿದರು.
"ಆಂಧ್ರದ ಕರ್ನೂಲ್ ರಾಜ್ಯಕ್ಕೆ ಸೇರಿಸುವ ವಿಚಾರ ಸರಿಯಾಗಿದೆ. ಆದರೆ ಗಡಿ ವಿವಾದಗಳು ಬಹಳ ಇವೆ. ಅಭಿವೃದ್ಧಿ ಕಡೆ ಗಮನ ಕೊಡುವುದು ಒಳಿತು. ಭಾರತ ದೇಶವು ಜಗತ್ತಿನ ನಾಲ್ಕನೆ ಹೆಚ್ಚು ಕಲ್ಲಿದ್ದಲು ಸಂಪನ್ಮೂಲ ಹೊಂದಿರುವ ದೇಶ. ಆದರೆ ಕಲ್ಲಿದ್ದಲು ಭಾರತದಿಂದ ದೇಶದ ಎಲ್ಲಾ ಅವಶ್ಯಕತೆಗೆ ಪೂರೈಸಲು ಸಾಧ್ಯವಿಲ್ಲ. 2024ರ ವೇಳೆ ಭಾರತದಲ್ಲಿ 1 ಬಿಲಿಯನ್ ಟನ್, ಉಳಿದ ಮೂಲಗಳಿಂದ 1500 ಮಿಲಿಯನ್ ಟನ್ ಕಲ್ಲಿದ್ದಲು ಉತ್ಪಾದನೆ ಮಾಡಬೇಕೆನ್ನುವ ಗುರಿಯಾಗಿದೆ" ಎಂದು ತಿಳಿಸಿದರು.