ಕಾರವಾರ, ಜ.12 (Daijiworld News/MB) : ಸಿದ್ಧರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿಯೇ ಮುಂದುವರಿಯಲಿ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೇಳುವ ಹಕ್ಕು ಡಿಕೆ ಶಿವಕುಮಾರ್ಗೆ ಇದೆ ಎಂದು ಮಾಜಿ ಸಚಿವ ಹಳಿಯಾಳದ ಶಾಸಕ ಆರ್.ವಿ ದೇಶಪಾಂಡೆ ಹೇಳಿದ್ದಾರೆ.
ಇಂದು ಸಿದ್ದಾಪುರದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಇನ್ನೂ ಕೂಡಾ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಅವರ ಅವಧಿ ಮುಗಿದಿಲ್ಲ. ಅವರ ಅವಧಿ ಮುಗಿದ ಬಳಿಕ ಹೈಕಮಾಂಡ್ ಆ ಸ್ಥಾನ ಯಾರಿಗೆ ನೀಡುವುದು ಎಂಬುದರ ಬಗ್ಗೆ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
"ಹೈಕಮಾಂಡ್ ಕೆಪಿಸಿಸಿ ಸ್ಥಾನ ಯಾರಿಗೆ ನೀಡಬೇಕು ಎನ್ನುವುದರ ಕುರಿತು ಎಲ್ಲರ ಬಳಿ ಅಭಿಪ್ರಾಯ ಪಡೆದುಕೊಂಡಿದೆ. ನಾಲ್ಕು ದಿನಗಳಲ್ಲಿ ಅಧ್ಯಕ್ಷ ಸ್ಥಾನದ ಕುರಿತು ಹೈಕಮಾಂಡ್ ಪ್ರಕಟ ಮಾಡುತ್ತದೆ. ಪಕ್ಷದ ಜವಾಬ್ದಾರಿಯನ್ನು ತೆಗೆದುಕೊಳ್ಳುವಂತೆ ನನಗೆ ಹೈಕಮಾಂಡ್ ಹೇಳಿತ್ತು. ಆದರೆ ನಾನು ಆ ಸ್ಥಾನದ ಆಕಾಂಕ್ಷಿಯಲ್ಲ" ಎಂದರು.
ಅವರು ರಾಜ್ಯ ಸರ್ಕಾರದ ಬಗ್ಗೆ ಪ್ರತಿಕ್ರಿಯೆ ನೀಡಿ , "ರಾಜ್ಯ ಸಂರ್ಕಾರವು ಸಂಪುಟ ವಿಸ್ತರಣೆಯ ವಿಷಯದಲ್ಲೇ ಗೊಂದಲದಲ್ಲಿದೆ. ಸರ್ಕಾರದಲ್ಲಿ ಹಣವೇ ಇಲ್ಲದೆ ಇರುವಾಗ ಅಭಿವೃದ್ಧಿಯಾಗಲು ಹೇಗೆ ಸಾಧ್ಯ, ರಾಜಕೀಯವಾಗಿ ರಾಜ್ಯಕ್ಕೆ ಕೆಂದ್ರದಿಂದ ದೊರಕಬೇಕಾದ ಬೆಂಬಲ ದೊರಕುತ್ತಿಲ್ಲ. ಇನ್ನು ರಾಜ್ಯದಲ್ಲಿ ಆಗಬೇಕಾದ ಅಭಿವೃದ್ಧಿ ಆಗುವುದಾದರು ಹೇಗೆ" ಎಂದು ಪ್ರಶ್ನೆ ಮಾಡಿದರು.