ವಿಜಯಪುರ, ಜ.12 (Daijiworld News/PY) : "ಎಲ್ಲರಿಗೂ ಸಚಿವರಾಗಬೇಕು ಅನ್ನೋ ಆಸೆ ಇರುತ್ತೆ. ಆದರೆ ಸಚಿವರನ್ನಾಗಿ ಮಾಡೋದು ಬಿಡೋದು ಮುಖ್ಯಮಂತ್ರಿ ಹಾಗೂ ಹೈಕಮಾಂಡ್ಗೆ ಬಿಟ್ಟ ವಿಚಾರ. ಇದಕ್ಕೆ ಪ್ರತಿಕ್ರಯಿಸುವಷ್ಟು ನಾನು ದೊಡ್ಡವನಲ್ಲ" ಎಂದು ಸಚಿವ ಸಿ ಸಿ ಪಾಟೀಲ್ ಹೇಳಿದ್ದಾರೆ.
"ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಂಪುಟ ವಿಸ್ತರಣೆ ಬಗ್ಗೆ ಪರಮಾಧಿಕಾರವಿದೆ. ಸಚಿವ ಸಂಪುಟ ಪುನಾರಚನೆ ಬಗ್ಗೆ ಯಾವುದೇ ಮಾಹಿತಿ ಇಲ್ಲ" ಎಂದರು.
"ಪಂಚಮಸಾಲಿ ಸಮುದಾಯಕ್ಕೆ ಸಚಿವ ಸ್ಥಾನಕ್ಕಾಗಿ ಆಗ್ರಹಿಸಿರುವುದು ಸ್ವಾಮೀಜಿ, ಸಮಾಜದ ಗುರುಗಳಾಗಿ ಬೇಡಿಕೆ ಸಲ್ಲಿಸುವುದು ಸಹಜ. ಈ ವಿಚಾರವಾಗಿ ನಾನೇನು ಹೇಳುವುದಿಲ್ಲ. ಎಲ್ಲರಿಗೂ ಸಚಿವರಾಗಬೇಕು ಅನ್ನೋ ಆಸೆ ಇರುತ್ತೆ. ಆದರೆ ಸಚಿವರನ್ನಾಗಿ ಮಾಡೋದು ಬಿಡೋದು ಮುಖ್ಯಮಂತ್ರಿ ಹಾಗೂ ಹೈಕಮಾಂಡ್ಗೆ ಬಿಟ್ಟ ವಿಚಾರ" ಎಂದು ಹೇಳಿದರು.
"ನನಗೆ ಎಲ್ಲರೂ ಸ್ನೇಹಿತರೇ ಕಾಂಗ್ರೆಸ್ ಪಕ್ಷದಲ್ಲೂ ನನಗೆ ಸ್ನೇಹಿತರಿದ್ದಾರೆ. ವಿಜಯಪುರ ಜಿಲ್ಲಾ ಬಿಜೆಪಿ ಬಣ ರಾಜಕೀಯದ ವಿಚಾರದ ಬಗ್ಗೆ ನನಗೆ ತಿಳಿದಿಲ್ಲ. ಮುಖ್ಯಮಂತ್ರಿಗಳು ಜ.16ರಂದು ವಿಜಯಪುರಕ್ಕೆ ಬರುತ್ತಿರುವ ಕಾರಣದಿಂದ ಅಧಿಕಾರಿಗಳ ಜೊತೆ ಸಭೆ ನಡೆಸಿ ಸಿದ್ದತೆಗಳ ಪರಿಶೀಲನೆ ನಡೆಸುತ್ತಿದ್ದೇನೆ. ಜ.18 ರಂದು ಅಮಿತ್ ಶಾ ರಾಜ್ಯಕ್ಕೆ ಆಗಮಿಸುತ್ತಾರೆ. ಈ ಕುರಿತು ಸಿದ್ಧತೆ ನಡೆಸಲಾಗುತ್ತಿದ್ದು ಅದರ ಪರಿಶೀಲನೆ ಮಾಡಲಾಗುತ್ತಿದೆ" ಎಂದು ಹೇಳಿದರು.