ಥೇನ್, ಜ.12 (Daijiworld News/PY) : "ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಕಾರ್ಯನಿರ್ವಹಿಸದ ಸರ್ಕಾರ" ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆ ಹೇಳಿದ್ದಾರೆ.
"ಶಿವಸೇನೆ, ಎನ್ಸಿಪಿ ಹಾಗೂ ಕಾಂಗ್ರೆಸ್ ಪಕ್ಷಗಳು ರಾಜ್ಯದಲ್ಲಿ ಸರ್ಕಾರವನ್ನು ರಚಿಸಲು ಐದು ವಾರಗಳಿಂದ ಹೆಚ್ಚಿನ ಅವಧಿಯನ್ನು ತೆಗೆದುಕೊಂಡಿವೆ ಇಂತಹ ಸರ್ಕಾರದಿಂದ ನಾವು ಏನನ್ನು ಬಯಸಲು ಸಾಧ್ಯ. ಸರ್ಕಾರ ಮುನ್ನಡೆಸುವ ಬಗ್ಗೆ ಅವರಿಗೆ ಏನೂ ತಿಳಿದಿಲ್ಲ" ಎಂದರು.
ಮಹಾರಾಷ್ಟ್ರದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ತಮ್ಮ ವಿಶ್ವಾಸವನ್ನು ತಿಳಿಸಿದ ರಾಣೆ, "ಬಿಜೆಪಿ ಪಕ್ಷವು 105 ಶಾಸಕರನ್ನು ಹೊಂದಿದೆ. ಶಿವಸೇನೆ 56 ಶಾಸಕರನ್ನು ಹೊಂದಿದ್ದು ಅದರಲ್ಲೂ 35 ಶಾಸಕರಿಗೆ ಪಕ್ಷದ ನಾಯಕತ್ವದ ವಿಚಾರವಾಗಿ ಬೇಸರವಿದೆ" ಎಂದು ಹೇಳಿದರು.
"ರೈತರ ಸಾಲಮನ್ನ ಮಾಡುವ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರದ ಭರವಸೆ ಟೊಳ್ಳಾಗಿದೆ. ಏಕೆಂದರೆ, ಅದು ಯಾವಾಗ ಜಾರಿಗೆ ಬರಲಿದೆ ಎಂಬ ವಿಚಾರದ ಬಗ್ಗೆ ಸರಿಯಾದ ಸಮಯವನ್ನು ನಿಗದಿಪಡಿಸಿಲ್ಲ" ಎಂದು ಹೇಳಿದರು.
ಜ.9 ಗುರುವಾರದಂದು ಮುಖ್ಯಮಂತ್ರಿ ಉದ್ದವ್ ಠಾಕ್ರೆ ಔರಾಂಗಾಬಾದ್ಗೆ ಭೇಟಿ ನೀಡಿದ್ದ ಬಗ್ಗೆ ಮಾತನಾಡಿದ ರಾಣೆ, "ಔರಂಗಾಬದ್ನಲ್ಲಿ ಯಾವುದೇ ಯೋಜನೆಗಳನ್ನು ಘೋಷಿಸದೇ, ಆ ಪ್ರದೇಶಕ್ಕೆ ಯಾವುದೇ ಹಣವನ್ನು ನೀಡದೇ ಮರಳಿ ಬಂದಿದ್ದಾರೆ" ಎಂದರು.
ಬಿಜೆಪಿ ಹಾಗೂ ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನಾ ಮೈತ್ರಿ ಬಗ್ಗೆ ಮಾತನಾಡಲು ನಿರಾಕರಿಸಿದ ರಾಣೆ, ಈ ವಿಚಾರವಾಗಿ ಬಿಜೆಪಿ ಅಧ್ಯಕ್ಷರು ಮಾತನಾಡುತ್ತಾರೆ ಎಂದು ಹೇಳಿದರು.