ಬೀದರ್, ಜ.12 (Daijiworld News/PY) : "ಬಿಜೆಪಿ ಸರ್ಕಾರ ರಾಜ್ಯದಲ್ಲಿ ಈ ಹಿಂದೆ ಮಂಜೂರು ಮಾಡಿರುವ ವಸತಿ ಯೋಜನೆ ಮನೆಗಳ ನಿರ್ಮಾಣ ಕಾರ್ಯ ಸ್ಥಗಿತಗೊಳಿಸಿ, ಹಣ ಬಿಡುಗಡೆಯನ್ನೂ ನಿಲ್ಲಿಸಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಕಾಂಗ್ರೆಸ್ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ನಿರ್ಧರಿಸಿದೆ" ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.
ನಗರದಲ್ಲಿ ಜ.12 ಭಾನುವಾರದಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ರಾಜ್ಯದಲ್ಲಿ 16.38 ಲಕ್ಷ ಮನೆಗಳನ್ನು ನಿರ್ಮಿಸುವ ಗುರಿ ಹೊಂದಿದ್ದು, 13 ಲಕ್ಷ ಮನೆಗಳಿಗೆ ಮಂಜೂರಾತಿ ನೀಡಲಾಗಿದೆ. 7 ಲಕ್ಷ ಮನೆಗಳ ನಿರ್ಮಾಣ ಕಾರ್ಯವನ್ನು ಅಕ್ರಮದ ಹೆಸರಿನಲ್ಲಿ ಸ್ಥಗಿತಗೊಳಿಸಿದ್ದು, ಹಣ ಬಿಡುಗಡೆಯನ್ನೂ ನಿಲ್ಲಿಸಲಾಗಿದೆ. ರದ್ದುಗೊಳಿಸಲಾದ ಮನೆಗಳಿಗೆ ಪುನಃ ಮಂಜೂರು ಮಾಡಲು ಸರ್ಕಾರ ಮುಂದಾಗಿದೆ. ಯೋಗ್ಯವಾದ ಮನೆಗಳಿಗೂ ಹಣ ಬಿಡುಗಡೆಯನ್ನು ತಡ ಮಾಡಲಾಗುತ್ತಿದೆ. ಹೀಗಾಗಿ ಸಾಲ ಮಾಡಿ ಮನೆಕಟ್ಟಿಸಿಕೊಂಡಿರುವ ಫಲಾನುಭವಿಗಳು ಆತ್ಮಹತ್ಯೆ ಮಾಡಿಕೊಳ್ಳುವಂತ ಪರಿಸ್ಥಿತಿಯನ್ನುಂಟು ಮಾಡಿದ್ದಾರೆ" ಎಂದರು.
"ಬಿಜೆಪಿ ಸರ್ಕಾರದ ಅಕ್ರಮ, ಸುಳ್ಳುಗಳನ್ನು ಹೊರತರುತ್ತೇನೆ ಎಂಬ ಕಾರಣದಿಂದ ನನ್ನ ಕ್ಷೇತ್ರವಾದ ಭಾಲ್ಕಿ ಮೇಲೆ ಟಾರ್ಗೆಟ್ ಮಾಡಲಾಗುತ್ತದೆ. ಕ್ಷೇತ್ರದಲ್ಲಿ ವಸತಿ ಯೋಜನೆ ಫಲಾನುಭವಿಗಳಿಗೆ ಬೋಗಸ್ ಹಕ್ಕು ಪತ್ರ ನೀಡಲಾಗಿದೆ ಎಂದು ತನಿಖೆಗೆ ಸೂಚಿಸಲಾಗಿದೆ. ತನಿಖೆ ಮಾಡುವುದು ತಪ್ಪಲ್ಲ, ಇದಕ್ಕೆ ಹೆದರುವುದಿಲ್ಲ. ತನಿಖೆ ನಡೆಸುವುದಾದರೇ ಇಡೀ ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ನಡೆಸಲಿ" ಎಂದು ಹೇಳಿದರು.
"5 ವರ್ಷಗಳಲ್ಲಿ ನನ್ನ ಕ್ಷೇತ್ರದಲ್ಲಿ 23,900 ಮನೆಗಳಿಗೆ ಮಂಜೂರಾತಿ ದೊರಕಿದೆ. ಫಲಾನುಭವಿಗಳನ್ನು ಗ್ರಾಮ ಸಭೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ ಶಾಸಕರು ಆಯ್ಕೆ ಮಾಡುವುದಲ್ಲ. ರಾಜೀವ್ಗಾಂಧಿ ವಸತಿ ನಿಗಮ ಮಂಜೂರಾತಿ ಬಗ್ಗೆ ಆದೇಶವನ್ನು ನೀಡಿದೆ. ಗ್ರಾ.ಪಂ ಮಟ್ಟದಲ್ಲಿ ಫಲಾನುಭವಿಗಳಿಗೆ ಹಣದ ದುರುಪಯೋಗ ಆಗದಂತೆ ಜಾಗೃತಿ ಮೂಡಿಸುವುವ ಉದ್ದೇಶದಿಂದ ನನ್ನ ಭಾವಚಿತ್ರವಿರುವ ಕರಪತ್ರವನ್ನು ಹೊರಡಿಸಿದ್ದೇನೆ" ಎಂದರು.