ನವದೆಹಲಿ, ಜ.12 (Daijiworld News/PY) : "ಕಾಂಗ್ರೆಸ್ಸಿಗರೇ ನೀವು ಎಷ್ಟೆ ವಿರೋಧಿಸಿದರೂ, ಪಾಕಿಸ್ತಾನದಿಂದ ದೌರ್ಜನ್ಯಕ್ಕೊಳಗಾಗಿ ವಲಸೆ ಬಂದಿರುವ ಪ್ರತಿಯೊಬ್ಬರಿಗೂ ಭಾರತೀಯ ಪೌರತ್ವ ದೊರಕುವವರೆಗೂ ತಾನು ಹಿಂದೆ ಸರಿಯುವುದಿಲ್ಲ." ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಮಧ್ಯ ಪ್ರದೇಶದ ಜಬಲ್ಪುರ್ನಲ್ಲಿ ಸಿಎಎ ಬೆಂಬಲಿಸಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತ್ ಶಾ ಅವರು, "ಯಾರು ಎಷ್ಟೇ ವಿರೋಧಿಸಿದರೂ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿ ಮಾಡದೇ ಬಿಡುವುದಿಲ್ಲ. ಪಾಕಿಸ್ತಾನದಲ್ಲಿ ದೌರ್ಜನ್ಯಕ್ಕೊಳಗಾಗಿ ಭಾರತಕ್ಕೆ ಬಂದಿರುವ ಪ್ರತಿಯೊಬ್ಬರಿಗೂ ಭಾರತೀಯ ಪೌರತ್ವ ದೊರಕುವವರೆಗೂ ತಾನು ಹಿಂದೆ ಸರಿಯುವುದಿಲ್ಲ. ಪಾಕಿಸ್ತಾನದಿಂದ ಬಂದಿರುವ ಹಿಂದೂ, ಸಿಖ್, ಬೌದ್ಧ ಮತ್ತು ಕ್ರೈಸ್ತ ವಲಸಿಗರಿಗೆ ಭಾರತೀಯರಿಗಿರುವಷ್ಟೇ ಹಕ್ಕು ಇದೆ" ಎಂದರು.
"ಭಾರತ ವಿರೋಧಿ ಘೋಷಣೆ ಕೂಗುವವವರನ್ನು ಜೈಲಿಗೆ ಹಾಕುತ್ತೇವೆ. ಜೆಎನ್ಯುನಲ್ಲಿ ಕೂಡಾ ಭಾರತ ವಿರೋಧಿ ಘೋಷಣೆ ಕೂಗುತ್ತಾರೆ ಇಂತವರು ಜೈಲಿನಲ್ಲಿರಬೇಕು. ದೇಶದ ವಿರುದ್ದ ಧ್ವನಿ ಎತ್ತುವ ಯಾರೇ ದೇಶದ್ರೋಹಿಗಳಿದ್ದರೂ ಅವರನ್ನು ಜೈಲಿಗೆ ಕಳುಹಿಸುತ್ತೇವೆ" ಎಂದು ಹೇಳಿದರು.
"ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೂ ಕಾಂಗ್ರೆಸ್ಸೀಗರು ವಿರೋಧಿಸುತ್ತಿದ್ದಾರೆ. ರಾಮ ಮಂದಿರ ನಿರ್ಮಾಣಕ್ಕೆ ಏನೇ ಅಡ್ಡಿ ಮಾಡಿ, ಆದರೆ ನಾಲ್ಕು ತಿಂಗಳಿನಲ್ಲಿ ಅಯೋಧ್ಯೆಯಲ್ಲಿ ಗಗನ ಚುಂಬಿಸುವ ಭವ್ಯವಾದ ಮಂದಿರ ನಿರ್ಮಾಣವಾಗಲಿದೆ" ಎಂದು ಹೇಳಿದರು.