ಬೆಂಗಳೂರು, ಜ.13 (Daijiworld News/PY) : ಬೆಂಗಳೂರಿನ ಬಿಟಿಎಂ ಕೆರೆಯ ಬಳಿಯ ರಂಕಾ ಕಾಲೊನಿ ರಸ್ತೆಯಲ್ಲಿ ಭಾನುವಾರ ರಾತ್ರಿ ಇಬ್ಬರು ರೌಡಿಶೀಟರ್ಗಳ ಮೇಲೆ ಫೈರಿಂಗ್ ನಡೆಸಿ ಬಂಧಿಸಿದ್ದಾರೆ.
ಸತೀಶ್ ಅಲಿಯಾಸ್ ಶೆಡ್ಕ(29) ಹಾಗೂ ಹಂದಿ ಮಹೇಶ (32) ಗುಂಡೇಟು ತಿಂದ ರೌಡಿಗಳು.
ಕೋರಮಂಗಲ ಹಾಗೂ ಶಿಡ್ಲಘಟ್ಟ ಪೊಲೀಸ್ ಠಾಣೆಗಳ ರೌಡಿಶೀಟರ್ ಪಟ್ಟಿಯಲ್ಲಿ ಸತೀಶ್ ಎಂಬಾತ್ ಹೆಸರಿದ್ದು, ಈತನ ವಿರುದ್ದ ಕೊಲೆ, ಹಲ್ಲೆ ಸೇರಿದಂತೆ ಹಲವಾರು ಪ್ರಕರಣಗಳಿವೆ.
ಶಿಡ್ಲಘಟ್ಟ ಠಾಣೆಯ ರೌಡಿಶೀಟರ್ ಆಗಿರುವ ಹಂದಿ ಮಹೇಶ ಎಂಬಾತನ ಮೇಲೆಯೂ ಹಲವು ಪ್ರಕರಣಗಳಿವೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ತಲೆಮರೆಸಿಕೊಂಡ ಇಬ್ಬರ ಬಂಧನಕ್ಕಾಗಿ ವಾರಂಟ್ ಹೊರಡಿಸಲಾಗಿತ್ತು. ಇಬ್ಬರೂ ತಮಿಳುನಾಡಿನ ಬಾಗಲೂರಿನಲ್ಲಿ ಅಡಗಿದ್ದರು. ಭಾನುವಾರ ರಾತ್ರಿ ಬಿಟಿಎಂ ಕೆರೆಯ ಬಳಿ ಇವರಿಬ್ಬರೂ ಜೊತೆಯಲ್ಲಿದ್ದಾರೆ ಎಂಬ ಮಾಹಿತಿ ತಿಳಿದ ಪೊಲೀಸರು ತಕ್ಷಣವೇ ಅಲ್ಲಿಗೆ ತೆರಳಿದ ಸಿಸಿಬಿ ಇನ್ಸ್ಪೆಕ್ಟರ್ ಪುನೀತ್ ಹಾಗೂ ಕೇಶವಮೂರ್ತಿ ನೇತೃತ್ವದ ಪೊಲೀಸರ ತಂಡ ಇಬ್ಬರನ್ನು ಬಂಧಿಸಲು ಕಾರ್ಯಾಚರಣೆ ನಡೆಸಿದ್ದರು.
ಈ ಸಂದರ್ಭ ಆರೋಪಿಗಳು ಕಾನ್ಸ್ಟೇಬಲ್ ಹನುಮೇಶ ಎಂಬುವವರಿಗೆ ಚೂರಿಯಿಂದ ಇರಿದು ತಪ್ಪಿಸಿಕೊಳ್ಳಲು ಮುಂದಾಗಿದ್ದು ಈ ವೇಳೆ ಪೊಲೀಸರು ತಮ್ಮ ಆತ್ಮರಕ್ಷಣೆಗಾಗಿ ರೌಡಿಗಳ ಕಾಲಿಗೆ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಪಿಗಳಿಂದ ಕಾರನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.