ನವದೆಹಲಿ, ಜ 13 (Daijiworld News/MSP): ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೊಂದಣಿ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಲು ಪ್ರತಿಪಕ್ಷಗಳು ಸಭೆ ಸೇರಲು ನಿರ್ಧರಿಸಿದ್ದು ಇದರ ನೇತೃತ್ವವನ್ನು ಕಾಂಗ್ರೆಸ್ ವಹಿಸಿದೆ. ಆದರೆ ಕಾಂಗ್ರೆಸ್ ನ ಒಗ್ಗಟ್ಟಿನ ಮಂತ್ರಕ್ಕೆ ಯಾಕೋ ಪ್ರಾರಂಭದಲ್ಲೇ ವಿಘ್ನ ಕಾಡಲಾರಂಭಿಸಿದೆ.
ಐಸಿಸಿ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಮಧ್ಯಾಹ್ನ 2 ಗಂಟೆಗೆ ಈ ಸಭೆ ನಡೆಯಲಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಸಂಬಂಧ ದೇಶಾದ್ಯಂತ ಪ್ರತಿಭಟನೆ ಮತ್ತು ವಿಶ್ವವಿದ್ಯಾಲಯಗಳಲ್ಲಿ ನಡೆದ ಹಿಂಸಾಚಾರ ಹಾಗೂ ದೇಶದಲ್ಲಿ ಕೇಂದ್ರ ಸರ್ಕಾರದ ನಿಲುವಿನಿಂದ ಉಂಟಾಗಿರುವ ಗೊಂದಲಗಳ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆ ನಡೆಸಲು ತೀರ್ಮಾನಿಸಲಾಗಿದೆ.
ಆದರೆ ವಿರೋಧ ಪಕ್ಷಗಳ ಸಭೆಗೆ ಬಹುಜನ ಸಮಾಜ ಪಕ್ಷ ಕೂಡ ಗೈರಾಗುವ ಸಾಧ್ಯತೆಯಿದೆ. ನವದೆಹಲಿಯಲ್ಲಿ ನಡೆಯುವ ಪ್ರತಿಪಕ್ಷ ನಾಯಕರ ಸಭೆಗೆ ಬಹುಜನ ಸಮಾಜ ಪಕ್ಷವು ಹಾಜರಾಗುವುದಿಲ್ಲ ಎಂದು ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಟ್ವೀಟ್ ಮಾಡಿದ್ದಾರೆ. ಹೀಗಾಗಿ ಬಿಎಸ್ ಪಿ ಪಕ್ಷದವೂ ಕಾಂಗ್ರೆಸ್ ನಿಂದ ಅಂತರ ಕಾಯ್ದುಕೊಳ್ಳುವ ಪ್ರಯತ್ನದಲ್ಲಿದೆ.
ಇನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕರೆದಿರುವ ಸಭೆಯಲ್ಲಿ ತಾನು ಭಾಗವಹಿಸುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಈಗಾಗಲೇ ಹೇಳಿದ್ದಾರೆ. ಕಾಂಗ್ರೆಸ್ ಮತ್ತು ಇತರ ಎಡಪಕ್ಷಗಳು ಕೊಳಕು ರಾಜಕೀಯ ಮಾಡುತ್ತಿವೆ ಎಂದು ಆರೋಪಿಸಿದ್ದ ಮಮತಾ ಬ್ಯಾನರ್ಜಿ ವಿರೋಧ ಪಕ್ಷದ ಸ್ಥಾನದಲ್ಲಿ ನಿಂತು ಸಿಎಎ-ಎನ್ ಆರ್ ಸಿ ವಿರುದ್ಧ ಏಕಾಂಗಿಯಾಗಿ ಹೋರಾಡುತ್ತೇವೆ ಎಂದು ಹೇಳಿದ್ದರು.