ನವದೆಹಲಿ, ಜ.13 (Daijiworld News/PY) : ದೇಶವನ್ನೆ ಬೆಚ್ಚಿ ಬೀಳಿಸಿದ ದೆಹಲಿಯ ನಿರ್ಭಯಾ ಅತ್ಯಾಚಾರ, ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳನ್ನು ಇದೇ ಜನವರಿ 22ರಂದು ಬೆಳಗ್ಗೆ 7ಗಂಟೆಗೆ ನೇಣಿಗೇರಿಸಲಿದ್ದು ಈ ಹಿನ್ನೆಲೆ ಭಾನುವಾರ ತಿಹಾರ್ ಜೈಲಿನಲ್ಲಿ ನೇಣುಗಂಬಕ್ಕೆ ಏರಿಸುವ ಪ್ರಾಕ್ಟೀಸ್ ನಡೆಸಿರುವುದಾಗಿ ವರದಿ ತಿಳಿಸಿದೆ.
ತಿಹಾರ್ ಜೈಲಿನಲ್ಲಿ ಏಕಕಾಲಕ್ಕೆ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸಲು ದಿನಗಣನೆ ಆರಂಭವಾಗಿದೆ.
ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳಾದ ಪವನ್ ಗುಪ್ತಾ, ಅಕ್ಷಯ್, ವಿನಯ್ ಶರ್ಮಾ ಹಾಗೂ ಮುಖೇಶ್ ಸಿಂಗ್ ಅವರನ್ನು ಜವನರಿ 22ರಂದು ಬೆಳಗ್ಗೆ 7 ಗಂಟೆಗೆ ಗಲ್ಲಿಗೇರಿಸುವಂತೆ ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್ ಡೆತ್ ವಾರಂಟ್ ಹೊರಡಿಸಿದೆ.
ನಾಲ್ವರು ಆರೋಪಿಗಳ ತೂಕದ ಆಧಾರದ ಮೇಲೆ ಕಲ್ಲು ಹಾಗೂ ಮರಳನ್ನು ತುಂಬಿದ್ದ ಗೋಣಿಚೀಲಗಳನ್ನು ನೇಣಿಗೇರಿಸಿ ತಾಲೀಮು ನಡೆಸಿರುವುದಾಗಿ ವರದಿ ವಿವರಿಸಿದೆ.
ತಿಹಾರ್ ಜೈಲಿನ ಸೆಲ್ 3ರಲ್ಲಿ ಸಂಸತ್ ಮೇಲೆ ದಾಳಿ ನಡೆಸಿದ್ದ ದೋಷಿ ಅಫ್ಜಲ್ ಗುರುವನ್ನು 2013ರಲ್ಲಿ ನೇಣಿಗೇರಿಸಲಾಗಿತ್ತು. ಇದೀಗ ತಿಹಾರ್ನಲ್ಲಿ ಮೊದಲ ಬಾರಿಗೆ ನಾಲ್ವರು ಅಪರಾಧಿಗಳನ್ನು ಒಂದೇ ಬಾರಿಗೆ ನೇಣಿಗೇರಿಸಲಾಗುತ್ತಿದೆ ಎಂದು ವರದಿ ತಿಳಿಸಿದೆ.
ನಾಲ್ವರು ಆರೋಪಿಗಳನ್ನು ಗಲ್ಲಿಗೇರಿಸುವ ವಧಾಕಾರನನ್ನು ಮೀರತ್ನಿಂದ ದೆಹಲಿಗೆ ಕಳುಹಿಸಲಾಗಿದೆ ಎಂದು ಉತ್ತರಪ್ರದೇಶದ ಜೈಲು ಅಧಿಕಾರಿಗಳು ತಿಳಿಸಿದ್ದಾರೆಂದು ವರದಿ ಹೇಳಿದೆ.