ಬೆಂಗಳೂರು, ಜ.13 (Daijiworld News/PY) : ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಗೊಂದಲಗಳು ಸೃಷ್ಟಿಯಾಗುತ್ತಿದ್ದು, ದೆಹಲಿ ವಿಧಾನಸಭೆ ಚುನಾವಣೆ ಬಳಿಕವೇ ರಾಜ್ಯ ಸಚಿವ ಸಂಪುಟ ವಿಸ್ತರಣೆ ಆಗಲಿದೆಯಾ ಎಂಬ ಸುದ್ದಿಗಳು ರವಾನೆಯಾಗುತ್ತಿದ್ದು ಈ ಬೆನ್ನಲ್ಲೇ ಅನರ್ಹ ಶಾಸಕರಿಗೆ ಸಂಪುಟ ವಿಸ್ತರಣೆಯ ಬಗ್ಗೆ ಒಳ್ಳೆಯ ಸುದ್ದಿ ನೀಡಿದ್ದು, ವಿದೇಶ ಪ್ರವಾಸದ ಮೊದಲೇ ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ಬಿಎಸ್ವೈ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಮಾತನಾಡಿದ ಬಿಎಸ್ವೈ, "ನಾಳೆ ಅಮಿತ್ ಶಾ ಅವರನ್ನು ಭೇಟಿ ಮಾಡಲು ಸಮಯ ಕೇಳಿದ್ದೇನೆ, ಅಮಿತ್ ಶಾ ಅವರು ಭೇಟಿಗೆ ಒಪ್ಪಿಗೆ ನೀಡಿದರೆ ನಾಳೆಯ ಕಾರ್ಯಕ್ರಮವನ್ನು ರದ್ದು ಮಾಡಿ ದೆಹಲಿಗೆ ತೆರಳಲಿದ್ದೇನೆ. ಅಮಿತ್ ಶಾ ಅವರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆಯ ಬಗ್ಗೆ ಚರ್ಚೆ ನಡೆಸಿ ಸಂಪುಟ ವಿಸ್ತರಣೆಗೆ ದಿನಾಂಕ ಗೊತ್ತುಪಡಿಸಿ ಬರುತ್ತೇನೆ" ಎಂದು ತಿಳಿಸಿದರು.
"ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಸ್ವಿಟ್ಜರ್ಲೆಂಡ್ನ ದಾವೋಸ್ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ಶೃಂಗ ಸಭೆಗೆ ನಾನೂ ಹೋಗುತ್ತಿದ್ದೇನೆ. ಆದರೆ ದಾವೋಸ್ನ ವಿಶ್ವ ಆರ್ಥಿಕ ಶೃಂಗ ಸಭೆಗೆ ತೆರಳುವ ಮುನ್ನ ಸಂಪುಟ ವಿಸ್ತರಣೆ ಮಾಡಲಾಗುತ್ತದೆ" ಎಂದರು.
"ದೆಹಲಿ ಚುನಾವಣೆಗೂ ಸಂಪುಟ ವಿಸ್ತರಣೆಗೂ ಯಾವುದೇ ಸಂಬಂಧವಿಲ್ಲ. ಈ ತಿಂಗಳಲ್ಲೇ ಸಂಪುಟ ವಿಸ್ತರಣೆ ಮಾಡುತ್ತೇವೆ. ಮಾತು ಕೊಟ್ಟಂತೆ ಎಲ್ಲಾ ಶಾಸಕರನ್ನು ಸಚಿವರನ್ನಾಗಿ ಮಾಡುತ್ತೇವೆ. ಈ ಬಗ್ಗೆ ಶಾಸಕರು ಆತಂಕಗೊಳ್ಳುವ ಅಗತ್ಯವಿಲ್ಲ" ಎಂದು ಹೇಳಿದರು.