ಬೆಂಗಳೂರು, ಜ.13 (Daijiworld News/PY) : "ಕನಕಪುರ ಛಲೋ ಚಳವಳಿಗೆ ಆಗಮಿಸಿರುವ ಕಲ್ಲಡ್ಕ ಪ್ರಭಾಕರ್ ಭಟ್ ಯಾರೆಂದು ನನಗೆ ತಿಳಿದಿಲ್ಲ" ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಕನಕಪುರದ ಕಪಾಲ ಬೆಟ್ಟದಲ್ಲಿ ಏಸುಕ್ರಿಸ್ತನ ಪ್ರತಿಮೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿರುವುದನ್ನು ಖಂಡಿಸಿ ಸೋಮವಾರ ಹಿಂದೂ ಜಾಗೃತಿ ವೇದಿಕೆ ವತಿಯಿಂದ 'ಕನಕಪುರ ಚಲೋ' ನಡೆಸಲಾಗುತ್ತಿದ್ದು ಈ ಸಂದರ್ಭ ಸಾವಿರಾರು ಸಂಖ್ಯೆಯ ಪ್ರತಿಭಟನಾಕಾರರು ರಸ್ತೆಗಿಳಿದಿರುವುದರಿಂದ ಕನಕಪುರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವಹಿಸಲಾಗಿದೆ.
ಕನಕಪುರ ಛಲೋ ಚಳವಳಿಯ ನಡುವೆಯೇ ಮಾತನಾಡಿದ ಡಿಕೆಶಿ, "ಈ ಚಳವಳಿಗೆ ಆಗಮಿಸಿರುವ ಕಲ್ಲಡ್ಕ ಪ್ರಭಾಕರ್ ಭಟ್ ಯಾರೆಂದು ನನಗೆ ತಿಳಿದಿಲ್ಲ, ಅಧಿಕಾರ ಪಪಡೆಯುವುದಕ್ಕಾಗಿ ಈ ರೀತಿಯ ಹೋರಾಟ ನಡೆಸುತ್ತಿದ್ದಾರೆ. ಗೋಮಾಳ ಜಾಗದಲ್ಲೇ ಏಸು ಪ್ರತಿಮೆ ನಿರ್ಮಾಣವಾಗುವುದರಲ್ಲಿ ಸಂಶಯ ಬೇಡ" ಎಂದು ಹೇಳಿದರು.
"ಸರ್ಕಾರಕ್ಕೆ ಈ ವಿಚಾರವಾಗಿ ಜಿಲ್ಲಾಧಿಕಾರಿ ವರದಿ ನೀಡಿದ್ದಾರೆ. ಸಂಪುಟ ಸಭೆಯಲ್ಲೇ ಈ ಬಗ್ಗೆ ಎಲ್ಲವೂ ಪರಿಹಾರವಾಗಲಿದೆ. ಗೋಮಾಳ ಜಾಗದಲ್ಲೇ ಏಸು ಪ್ರತಿಮೆ ನಿರ್ಮಾಣವಾಗುತ್ತದೆ" ಎಂದರು.
"ಏಸುಕ್ರಿಸ್ತ ಪ್ರತಿಮೆ ನಿರ್ಮಾಣವನ್ನು ವಿರೋಧಿಸಿ ಪ್ರತಿಭಟನಾಕಾರರು ಬರುತ್ತಾರೆ, ಹೋಗುತ್ತಾರೆ. ಇದರಿಂದ ಏಸು ಪ್ರತಿಮೆ ನಿರ್ಮಾಣಕ್ಕೆ ಏನೂ ತೊಂದರೆಯಾಗಲ್ಲ. ಕನಕಪುರದಲ್ಲಿ ಶಾಂತಿ ಕಾಪಾಡಬೇಕೆಂದು ಜನರಲ್ಲಿ ಹೇಳಿದ್ದೇನೆ. ನಮ್ಮ ಕಡೆಯಿಂದ ಪ್ರತಿಭಟನಾ ಸ್ಥಳಕ್ಕೆ ಯಾರೂ ಹೋಗುವುದಿಲ್ಲ. ಈಗ ಬಿಜೆಪಿ ಅಧಿಕಾರದಲ್ಲಿರುವ ಕಾರಣ ಕೆಲವರು ಪ್ರತಿಭಟನಾ ಸ್ಥಳಕ್ಕೆ ಹೋಗುತ್ತಾರೆ. ರಾಜಕಾರಣದಲ್ಲಿ ಪ್ರತಿಭಟನಾಕಾರರು ಇರಬೇಕು. ಆಗ ನಾವು ಎಚ್ಚರಿಕೆ ವಹಿಸಿ ಕೆಲಸ ಮಾಡಬೇಕಾಗುತ್ತದೆ. ಪ್ರತಿಭಟನೆ ನಡೆಸುತ್ತಿರುವವರಿಗೆ ಶುಭವಾಗಲಿ" ಎಂದರು.
"ನಮ್ಮ ಕಾಂಗ್ರೆಸ್ ಶಾಸಕರು ಅವರಿಗೆ ಅಧಿಕಾರ ನೀಡಿದ್ದಾರೆ. ಧರ್ಮದಿಂದಲೇ ವಿಶ್ವಕ್ಕೆ ಶಾಂತಿ. ಜಾತಿ, ಧರ್ಮ ಅನ್ನೋದು ನನಗೆ ಲೆಕ್ಕಕ್ಕಿಲ್ಲ. ನನ್ನದೇ ಆದ ತತ್ವ ಇದೆ, ನಿಷ್ಠೆಯಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. ಬೆಂಗಳೂರು, ರಾಮನಗರ, ಮಂಡ್ಯ, ಮೈಸೂರು, ತುಮಕೂರಿನಿಂದ 10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಕಪಾಲಬೆಟ್ಟದ ಬಳಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಪೊಲೀಸರು ಇಂದು ಕಪಾಲ ಬೆಟ್ಟಕ್ಕೆ ತೆರಳುವವರಿಗೆ ಸಂಪೂರ್ಣ ನಿಷೇಧ ಹೇರಿದ್ದಾರೆ. ಭದ್ರತೆಗೆ 1 ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ" ಎಂದು ಹೇಳಿದರು.