ಬಾಗಲಕೋಟೆ, ಜ.13 (Daijiworld News/PY) : "ಸಿದ್ದರಾಮಯ್ಯ ಅವರು ಖಾಲಿ ಕೂತಿದ್ದಾರೆ. ಜನ ನನ್ನನ್ನು ಮರೆತು ಹೋಗಬಾರದು ಅನ್ನೋದಕ್ಕೆ ಪ್ರತಿದಿನ ಮಾಧ್ಯಮದಲ್ಲಿ ಬರಬೇಕು ಅನ್ನೋ ಸಲುವಾಗಿ ಸಿದ್ದರಾಮಯ್ಯ ಏನೇನೋ ಹೇಳುತ್ತಾರೆ" ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಗೋವಿಂದ ಕಾರಜೋಳ, ಕೇಂದ್ರ ಸರ್ಕಾರ ರಾಜ್ಯಕ್ಕೆ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ಪರಿಹಾರ ಕೊಟ್ಟಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. "ಸರ್ಕಾರದ ಆದೇಶಗಳು ಬಾಯಿಂದ ಬರೋದಿಲ್ಲ. ಬ್ಲ್ಯಾಕ್ ಆ್ಯಂಡ್ ವೈಟ್ನಲ್ಲಿರುತ್ತವೆ ಅದನ್ನು ಓದಬಹುದು ಸಿದ್ದರಾಮಯ್ಯ ಅವರು ಒಮ್ಮೆ ಅದನ್ನು ಓದಲಿ" ಎಂದು ಹೇಳಿದರು.
"ಎಸ್ಡಿಆರ್ಎಫ್, ಎನ್ಡಿಆರ್ಎಫ್ ಪರಿಹಾರದ ಬಗ್ಗೆ ಸಮಿತಿಗಳು ಇರುತ್ತವೆ. ಹಾಗಾಗಿ ಪರಿಹಾರ ಮಂಜೂರಾಗುತ್ತದೆ. ಇಂತಹ ಅನೇಕ ಸಂದರ್ಭಗಳು ಸ್ವಾತಂತ್ರ್ಯ ಬಂದ ಮೇಲೆ ಬಂದಿವೆ. ಈ ಎಲ್ಲಾ ಸಂದರ್ಭಗಳನ್ನು ಗಮನಿಸಿದರೆ ಮೋದಿ ಸರ್ಕಾರವೇ ಅತೀ ಹೆಚ್ಚಿನ ಪರಿಹಾರ ಧನ ಕೊಟ್ಟಿದ್ದು" ಎಂದರು.
"ಈ ಹಿಂದಿನ ಸರ್ಕಾರ ಎಷ್ಟು ಪರಿಹಾರ ಧನ ನೀಡಿದೆ ಎಂಬುದನ್ನು ತಿಳಿಸಲಿ. ಭಾವನಾತ್ಮಕ ಸಮಸ್ಯೆ ಕೆರಳಿಸಲು ಮನಬಂದಹಾಗೆ ಮಾತನಾಡಬಾರದು. ತುಮಕೂರಿಗೆ ಮೋದಿ ಭೇಟಿ ನೀಡಿದ ವೇಳೆ ಯಡಿಯೂರಪ್ಪ ಅವರು ಪ್ರವಾಹ ಪರಿಹಾರಕ್ಕಾಗಿ ಮನವಿ ಮಾಡಿಕೊಂಡಿದ್ದರಲ್ಲಿ ಯಾವುದೇ ತಪ್ಪಿಲ್ಲ, ಆ ವಿಚಾರವನ್ನು ಬೇರೆಯೇ ರೀತಿಯಾಗಿ ಟ್ವಿಸ್ಟ್ ಮಾಡಲಾಗಿದೆ" ಎಂದು ಹೇಳಿದರು.