ನವದೆಹಲಿ, ಜ 13 (Daijiworld News/MSP): ಶಬರಿಮಲೆಗೆ ದೇಗುಲಕ್ಕೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಬೇಕೆಂಬ ತೀರ್ಪಿನ ವಿರುದ್ಧ ಸಲ್ಲಿಸಲಾದ ಮರುಪರಿಶೀಲನಾ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮೂರು ವಾರಗಳ ಕಾಲ ಮುಂದೂಡಿದ್ದು,ಎಲ್ಲಾ ವಕೀಲರು ಸಭೆ ನಡೆಸಿ ಚರ್ಚಿಸಿ ತೀರ್ಮಾನಕ್ಕೆ ಬರುವಂತೆ ಹೇಳಿದೆ.ಮಾತ್ರವಲ್ಲದೇ ಹಿಂದಿನ ಐವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠ ಎತ್ತಿರುವ 7 ಪ್ರಶ್ನೆಗಳನ್ನು ಮಾತ್ರ ಪರಿಗಣಿಸಲಾಗುವುದು ಎಂದು ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಎಸ್ಎ ಬೊಬ್ಡೆ ಅವರ ನೇತೃತ್ವದ ಒಂಬತ್ತು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ನ್ಯಾಯಪೀಠವು ಅರ್ಜಿಯನ್ನು ಸೋಮವಾರ ವಿಚಾರಣೆಗೆತ್ತಿಕೊಂಡು ಶಬರಿಮಲೆಗೆ ಎಲ್ಲಾ ವಯೋಮಾನದ ಮಹಿಳೆಯರು ಪ್ರವೇಶಿಸುವ ಕುರಿತ ವಿಚಾರಣೆಯನ್ನು ಮಾತ್ರ ನಡೆಸಲಿದೆ. ಆದರೆ ಈ ವಿವಾದ ಕುರಿತು ವಕೀಲರೆಲ್ಲರೂ ಸಭೆ ಸೇರಿ ಒಂದು ತೀರ್ಮಾನಕ್ಕೆ ಬಂದ ಮೇಲೆ ತೀರ್ಪು ನೀಡಲಾಗುವುದು ಎಂದು ಹೇಳಿತು. ಈ ಹಿನ್ನಲೆಯಲ್ಲಿ ಇದೇ 17ರಂದು ವಕೀಲರ ಸಭೆ ಕರೆಯಲು ಸುಪ್ರೀಂ ಕೋರ್ಟ್ ನ ಸೆಕ್ರೆಟರಿ ಜನರಲ್ ಗೆ ಕೋರ್ಟ್ ಇದೇ ಸಂದರ್ಭದಲ್ಲಿ ಆದೇಶ ನೀಡಿತು.
ಕೇರಳದ ಶಬರಿಮಲೆ ದೇವಸ್ಥಾನಕ್ಕೆ ಎಲ್ಲ ವಯಸ್ಸಿನ ಮಹಿಳೆಯರೂ ಪ್ರವೇಶಿಸಬಹುದು ಎಂಬ ಸುಪ್ರೀಂಕೋರ್ಟ್ನ ಹಿಂದಿನ ಆದೇಶವನ್ನು ಪ್ರಶ್ನಿಸಿ 50ಕ್ಕೂ ಪರಾಮರ್ಶನಾ ಅರ್ಜಿಗಳು ಸುಪ್ರೀಂಕೋರ್ಟ್ಗೆ ಸಲ್ಲಿಕೆಯಾಗಿದ್ದವು.
ಪಾರ್ಸಿ ದೇವಾಲಯ, ಮಸೀದಿ,ದಾವೂದಿ ಬೋರಾ ಸಮುದಾಯ ಹಾಗೂ ವಿವಿಧ ಧಾರ್ಮಿಕ ಕೇಂದ್ರಗಳಲ್ಲಿ ಮಹಿಳೆಯರಿಗೆ ಪ್ರವೇಶ ನಿರ್ಬಂಧಿಸಿರುವ ಬಗ್ಗೆ ಸಾಕಷ್ಟು ವಿವಾದಗಳಿವೆ. ಹೀಗಾಗಿ ಈ ಎಲ್ಲಾ ಪ್ರಕರಣಗಳ ಒಟ್ಟಿಗೆ ವಿಚಾರಣೆ ನಡೆಸುವುದು ಸೂಕ್ತ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿತು. ಎಲ್ಲಾ ಅರ್ಜಿದಾರರು, ಪ್ರತಿವಾದಿಗಳ ಪರ ವಕೀಲರು ಒಟ್ಟಿಗೆ ಕುಳಿತು ಚರ್ಚಿಸಿ ಯಾವ ಸಮಸ್ಯೆಗಳನ್ನು ನ್ಯಾಯಾಲಯದ ಮುಂದಿಡಬೇಕು ಎಂದು ನಿರ್ಧರಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನ ಸೆಕ್ರೆಟರಿ ಜನರಲ್ ಗೆ ನಾಲ್ವರು ವಕೀಲರ ನಡುವೆ ಸಮನ್ವಯತೆ ತರುವಂತೆ ಸೂಚಿಸಲಾಗಿದೆ.