ನವದೆಹಲಿ, ಜ.13 (Daijiworld News/PY) : ಜ.26ರಂದು ನಡೆಯಲಿರುವ ಗಣರಾಜ್ಯೋತ್ಸವ ದಿನಾಚರಣೆಯ ಹಿನ್ನೆಲೆ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏಳು ದಿನಗಳ ಕಾಲ ವಿಮಾನ ಸಂಚಾರಕ್ಕೆ ಅನುಮತಿ ಇಲ್ಲ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಎಲ್ಲಾ ಪೈಲಟ್ಗಳಿಗೆ ನೋಟಿಸ್ ಜಾರಿ ಮಾಡಿದೆ ಎಂದು ವರದಿ ಹೇಳಿದೆ.
ಜನವರಿ 18, 20, 21, 22, 23, 24 ಹಾಗೂ 26ರಂದು ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ 10.15 ರಿಂದ 12.15ರವರೆಗೆ ಯಾವುದೇ ವಿಮಾನ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ವರದಿ ತಿಳಿಸಿದೆ.
ಗಣರಾಜ್ಯೋತ್ಸವ ಆಚರಣೆ ನಡೆಯುವ ಹಿನ್ನೆಲೆ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸುವ ಕುರಿತಾಗಿ ಪೊಲೀಸ್ ಕಮೀಷನರ್ ಅಮೂಲ್ಯ ಪಟ್ನಾಯಕ್ ಅವರು ಸಬ್ ಡಿವಿಷನಲ್ ಪೊಲೀಸ್ ಅಧಿಕಾರಿಗಳೊಂದಿಗೆ ಹಾಗೂ ಠಾಣಾಧಿಕಾರಿಗಳ ಜೊತೆ ಮಾತುಕತೆ ನಡೆಸಿರುವುದಾಗಿ ವರದಿ ತಿಳಿಸಿದೆ.
ಭಯೋತ್ಪಧನಾ ನಿಗ್ರಹದ ಸಲುವಾಗಿ ಗಣರಾಜ್ಯೋತ್ಸವಕ್ಕೂ ಮೊದಲು ಬಾಡಿಗೆದಾರರ ಪರಶೀಲನೆ, ಹೊಟೇಲ್ಗಳು, ಅತಿಥಿ ಗೃಹಗಳ ತಪಾಸಣೆ ಹಾಗೂ ಮಾರುಕಟ್ಟೆ ಸ್ಥಳಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಸಿದ್ದತೆ ನಡೆಸಲಾಗುತ್ತಿದ್ದು, ಮಾರ್ಕೆಟ್, ಮಾಲ್ಸ್ ಹಾಗೂ ಧಾರ್ಮಿಕ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆಗಳನ್ನು ಕೈಗೊಳ್ಳಲಾಗುವುದು ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ.