ಪಾಟ್ನಾ, ಜ.13 (Daijiworld News/PY) : "ಬಿಹಾರದಲ್ಲಿ ಎನ್ಆರ್ಸಿ ಅಗತ್ಯವಿಲ್ಲ. ಎನ್ಆರ್ಸಿ ಹಾಗೂ ಸಿಎಎ ವಿಚಾರದಲ್ಲಿ ಸದನದಲ್ಲಿ ಚರ್ಚೆ ನಡೆಸಲು ನಾವು ಸಿದ್ದ" ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಅವರು, "ಅಸ್ಸಾಂ ಅನ್ನು ದೃಷ್ಟಿಯಲ್ಲಿಟ್ಟುಕೊಂಡು ಎನ್ಆರ್ಸಿ ಜಾರಿಯಾಗಿದ್ದರೂ ಅದು ಇಡೀ ದೇಶಕ್ಕಲ್ಲ. ದೇಶಾದ್ಯಂತ ಎನ್ಆರ್ಸಿಯನ್ನು ವಿಸ್ತರಿಸುವಲ್ಲಿ ಪ್ರಧಾನಿ ಮೋದಿ ಈಗಾಗಲೇ ನಿರಾಕರಿಸಿದ್ದಾರೆ" ಎಂದು ಹೇಳಿದರು.
"ಎನ್ಆರ್ಸಿಯನ್ನು ದೇಶಾದ್ಯಂತ ವಿಸ್ತರಿಸುವಲ್ಲಿ ಯಾವುದೇ ತರ್ಕವಿಲ್ಲ ಎಂದೆನಿಸುತ್ತಿದೆ. ಎನ್ಆರ್ಸಿ ಹಾಗೂ ಸಿಎಎ ವಿಚಾರದಲ್ಲಿ ಸದನದಲ್ಲಿ ಚರ್ಚೆ ನಡೆಸಲು ನಾವು ಸಿದ್ದ. ಈ ವಿಚಾರವಾಗಿ ಚರ್ಚೆ ನಡೆಸುವಾಗ ಬರುವಂತಹ ಪ್ರತಿಕ್ರಿಯೆಯನ್ನು ಕೇಂದ್ರಸರ್ಕಾರಕ್ಕೆ ತಿಳಿಸಲಾಗುತ್ತದೆ. ಬಿಹಾರದಲ್ಲಿ ಎನ್ಆರ್ಸಿ ಅಗತ್ಯವಿಲ್ಲ, ಸಾಮಾನ್ಯ ಜನಗಣತಿಯ ಹೊರತಾಗಿಯೂ ಜಾತಿ ಆಧಾರಿತ ಗಣತಿ ಅಗತ್ಯ" ಎಂದರು.
ಈ ವಿಚಾರದ ನಡುವೆ ಸದನದಲ್ಲಿ ಎನ್ಆರ್ಸಿ ಹಾಗೂ ಎನ್ಪಿಆರ್ನ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತೆ ಆಗ್ರಹಿಸಿದ ಪ್ರತಿಪಕ್ಷ ಆರ್ಜೆಡಿ ಸದಸ್ಯರು ಸದನದ ಹೊರಗಡೆ ಪ್ರತಿಭಟನೆ ನಡೆಸಿದರು.