ರಾಯಚೂರು, ಜ.13 (Daijiworld News/PY) : "ಮುಖ್ಯಮಂತ್ರಿಗಳು ಏನೇ ಹೇಳಿದರು ಅದನ್ನು ಕೇಳುವುದು ನಮ್ಮ ಕರ್ತವ್ಯ. ಎಲ್ಲರಿಗೂ ಸಚಿವ ಸ್ಥಾನ ಕೊಡಬೇಕು ಎನ್ನುವುದು ನಮ್ಮ ಒತ್ತಾಯ. ಒಂದು ವೇಳೆ ಸಚಿವ ಸ್ಥಾನ ನೀಡದೇ ಇದ್ದಲ್ಲಿ ಕಾದು ನೋಡುತ್ತೇವೆ" ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಹೇಳಿದರು.
ದೇವದುರ್ಗದ ತಿಂಥಿಣಿ ಬಳಿಯ ಕಾಗಿನೆಲೆ ಗುರುಪೀಠದಲ್ಲಿ ಆಯೋಜಿಸಿರುವ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮದಲ್ಲಿ ಮಾತನಾಡಿದ ಎಚ್.ವಿಶ್ವನಾಥ್ ಅವರು, "ಯಡಿಯೂರಪ್ಪ ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳುವ ನಾಯಕ. ನಾಲ್ಕನೇ ಬಾರಿಗೆ ಬಿಎಸ್ವೈ ಸಿಎಂ ಆಗಬೇಕಾದರೆ ಅದರಲ್ಲಿ ಹಾಲುಮತ ಸಮಾಜದ ಮುಖ್ಯ ಪಾತ್ರವೂ ಇದೆ. ಹಾಲುಮತ ಸಮಾಜದಿಂದ ಬಂದ ನಾಲ್ಕು ಜನ ಶಾಸಕರು ನಮ್ಮ ಸ್ಥಾನ ತೊರೆದು ಅವರ ಬೆನ್ನ ಹಿಂದೆ ನಿಂತಿದ್ದೇವೆ" ಎಂದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿಎಸ್ವೈ ಸಿಎಂ ಆಗಲು 17 ಜನ ತ್ಯಾಗ ಮಾಡಿದ್ದೇವೆ. ಮುಖ್ಯಮಂತ್ರಿಗಳು ಏನೇ ಹೇಳಿದರೂ ಅದನ್ನು ಕೇಳೋದು ನಮ್ಮ ಕರ್ತವ್ಯ. ಎಲ್ಲರಿಗೂ ಸಚಿವ ಸ್ಥಾನ ನೀಡಬೇಕು ಎನ್ನುವುದು ನಮ್ಮ ಒತ್ತಾಯ. ಆದರೆ ಸಚಿವ ಸ್ಥಾನ ಕೊಡದೇ ಇದ್ದರೆ ಕಾದು ನೋಡುತ್ತೇವೆ. ಇವತ್ತು ಸೋಮವಾರ, ನಾಳೆ, ನಾಡಿದ್ದು, ಏನಾಗುತ್ತದೆ ಎಂದು ಈ ಕ್ಷಣವೇ ಹೇಗೆ ಹೇಳುವುದು"ಎಂದು ತಿಳಿಸಿದರು.
17 ಜನರಿಗೂ ಸಚಿವ ಸ್ಥಾನ ನೀಡಬೇಕು ಎಂದು ಹೇಳಿಕೆ ನೀಡಿದ ಎಚ್.ವಿಶ್ವನಾಥ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬಿಎಸ್ವೈ, "ಯಾರ್ ಯಾರೋ ಹೇಳಿದ್ದಕ್ಕೆ ಸಚಿವ ಸ್ಥಾನ ಕೊಡಲು ಸಾಧ್ಯವಿಲ್ಲ, ಅಮಿತ್ ಶಾ ಅವರ ನಿರ್ಧಾರವೇ ಅಂತಿಮ" ಎಂದು ಹೇಳಿದ್ದರು.