ಹೈದರಾಬಾದ್, ಜ.13 (Daijiworld News/PY) : 10 ವರ್ಷದ ಬಾಲಕನ ಅನ್ನದಾಳದಲ್ಲಿ ಸಿಲುಕಿರುವ ಕೋಳಿ ಮೂಳೆಯನ್ನು ತೆಗೆದು ಬಾಲಕನ ಪ್ರಾಣ ಉಳಿಸುವಲ್ಲಿ ಹೈದರಾಬಾದ್ ಆಸ್ಪತ್ರೆಯ ವೈದ್ಯರ ತಂಡವು ಯಶಸ್ವಿಯಾಗಿದ್ದು, ಮಕ್ಕಳತ್ತ ಹೆಚ್ಚಿನ ಕಾಳಜಿ ವಹಿಸಿ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ಬಾಲಕನ ಗಂಟಲಿನಲ್ಲಿ ಕೋಳಿ ಮೂಳೆ ಸಿಲುಕಿಕೊಂಡ ಎರಡು ದಿನಗಳ ಬಳಿಕ ವೈದ್ಯರ ತಂಡವು ಗಂಟಲಿನಿಂದ ಕೋಳಿ ಮೂಳೆಯನ್ನು ತೆಗೆದು ಬಾಲಕನ ಪ್ರಾಣ ಉಳಿಸಿದ್ದಾರೆ.
ಭಾನುವಾರದಂದು ಎಂಡೋಸ್ಕೋಪಿಕ್ ಕ್ಲಿಪಿಂಗ್ ಎಂಬ ಕಾರ್ಯವಿಧಾನದ ಮೂಲಕ ಬಾಲಕನ ಅನ್ನನಾಳದಲ್ಲಿ ಸಿಲುಕಿದ್ದ ಕೋಳಿ ಮೂಳೆಯನ್ನು ತೆಗೆಯಲಾಯಿತು ಎಂದು ವೈದ್ಯರ ತಂಡ ತಿಳಿಸಿದೆ.
ಅನ್ನನಾಳದಲ್ಲಿ ಸಿಲುಕಿಕೊಂಡಿದ್ದ ಮೂಳೆಯನ್ನು ಸಮಯಕ್ಕೆ ಸರಿಯಾಗಿ ತೆಗೆಯದೇ ಇದ್ದಲ್ಲಿ ಮಕ್ಕಳ ಪ್ರಾಣಕ್ಕೆ ಅಪಾಯವಾಗಬಹುದು ಎಂದು ವೈದ್ಯರು ತಿಳಿಸಿದ್ಧಾರೆ.
ಇಂತಹ ಅವಘಡ ಸಂಭವಿಸಿದ್ದಲ್ಲಿ ವೈದ್ಯರಲ್ಲಿ ಪರೀಕ್ಷಿಸುವುದು ಮುಖ್ಯ. ಇಲ್ಲದೇ ಹೋದಲ್ಲಿ ಅನ್ನನಾಳಕ್ಕೆ ಸೋಂಕಾಗುವ ಸಾಧ್ಯತೆಗಳಿದ್ದು, ಪ್ರಾಣಹಾನಿಯಾಗಬಹುದು.
ಕೋಳಿ ಮೂಳೆ ಅಥವಾ ಯಾವುದೇ ವಸ್ತುಗಳು ಅನ್ನನಾಳದಲ್ಲಿ ಸಿಲುಕಿಕೊಂಡಲ್ಲಿ ಉಸಿರಾಟಕ್ಕೂ ಕಷ್ಟವಾಗಬಹುದು ಅಲ್ಲದೇ ಪ್ರಾಣವೇ ಹೋಗಬಹುದು. ಹೀಗಾಗಿ ಆಹಾರ ಸೇವಿಸುವಾಗ ಅಥವಾ ಸಣ್ಣ ವಸ್ತುಗಳೊಂದಿಗೆ ಆಡುವಾಗ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿವುದು ಅಗತ್ಯ. ಇಲ್ಲದಿದ್ದರೆ ಪ್ರಾಣವೇ ಹೋಗುವ ಪರಿಸ್ಥಿತಿ ಎದುರಾಗಬಹುದು.