ಬೆಂಗಳೂರು, ಜ.13 (Daijiworld News/PY) : ಬೆಂಗಳೂರಿನ ಜಾಲಹಳ್ಳಿಯ ಪ್ರಸ್ಟೀಜ್ ಕೆನ್ಸಿಂಗ್ಟನ್ ಅಪಾರ್ಟ್ಮೆಂಟ್ ಗೇಟ್ನ ಬಳಿ ಮಲಗಿದ್ದ ನಾಯಿಯೊಂದರ ಮೇಲೆ ಕಲ್ಲು ಎತ್ತಿ ಹಾಕಿದ್ದ ವ್ಯಕ್ತಿಯ ಮೇಲೆ ಇದೀಗ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಶುಕ್ರವಾರ ಈ ಅಪಾರ್ಟ್ಮೆಂಟ್ನ ನಿವಾಸಿಯಾದ ವರುಣ್ ಎಂಬಾತ ವಾಕಿಂಗ್ ಹೋಗಿ ಮರಳಿ ಬರುವ ವೇಳೆ ನಾಯಿಯೊಂದು ಅಪಾರ್ಟ್ಮೆಂಟ್ ಗೇಟ್ನ ಬಳಿ ಮಲಗಿತ್ತು. ಇದನ್ನು ನೋಡಿ ಕೋಪಗೊಂಡ ವರುಣ್ ಕಲ್ಲೊಂದನ್ನು ತಂದು ನಾಯಿಯ ಮೇಲೆ ಹಾಕಿದ್ದಾನೆ.
ನಾಯಿಯ ಮೇಲೆ ಕಲ್ಲನ್ನು ತಂದು ಹಾಕಿದ ದೃಶ್ಯ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು. ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ವೀಡಿಯೋ ವೈರಲ್ ಆಗಿದ್ದು, ವೀಡಿಯೋವನ್ನು ನೋಡಿದ ಪ್ರಾಣಿ ದಯಾ ಸಂಘದ ವತಿಯಿಂದ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಘಟನೆಯ ಬಗ್ಗೆ ಪ್ರಾಣಿಗಳ ಮೇಲಿನ ಹಿಂಸೆ ನಿರ್ಮೂಲನೆ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿದ್ದು, ವರುಣ್ ಎಂಬಾತನ ವಿರುದ್ದ ಎಫ್ಐಆರ್ ದಾಖಲಿಸಿದ್ಧಾರೆ. ವರುಣ್ನನ್ನು ಪೊಲೀಸರು ವಶಕ್ಕೆ ಪಡಿಸಿಕೊಂಡಿದ್ದರಾದರೂ ಜಾಮೀನಿನ ಮೇರೆಗೆ ಆತನನ್ನು ಬಿಡುಗಡೆಗೊಳಿಸಲಾಗಿದೆ. ವರುಣ್ನನ್ನು ಪರೀಕ್ಷೆಗೆ ಒಳಪಡಿಸಿದ ವೈದ್ಯರು ಆತ ಮಾನಸಿಕ ಅಸ್ವಸ್ಥ ಎಂದು ಹೇಳಿದ್ಧಾರೆ ಎನ್ನಲಾಗಿದೆ.
ಅಪಾರ್ಟ್ಮೆಂಟ್ ಗೇಟ್ನ ಬಳಿ ಮಲಗುತ್ತಿದ್ದ ನಾಯಿ ಕಳೆದ 4 ವರ್ಷಗಳಿಂದ ಅಲ್ಲೇ ವಾಸಿಸುತ್ತಿದ್ದು ಯಾರಿಗೂ ತೊಂದರೆ ನೀಡುತ್ತಿರಲಿಲ್ಲ ಎನ್ನಲಾಗಿದೆ.
ಗಾಯಗೊಂಡ ನಾಯಿಯ ಕುರಿತ ಸ್ಥಳಿಯ ನಿವಾಸಿ ಹರೀಶ್ ಎಂಬುವವರು ಪ್ರಾಣಿ ದಯಾ ಸಂಘಕ್ಕೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪ್ರಾಣಿ ದಯಾ ಸಂಘದ ಸಿಬ್ಬಂದಿ ನಾಯಿಗೆ ಚಿಕಿತ್ಸೆ ನೀಡಿದ್ದಾರೆ ಎಂದು ತಿಳಿದಿಬಂದಿದೆ.