ಬೆಂಗಳೂರು, ಜ.14 (Daijiworld News/PY) : "ಸೂರಿಲ್ಲದ ಬಡವರಿಗೆ ಮನೆ ಸಿಗಬೇಕು ಎನ್ನುವುದು ಸರ್ಕಾರದ ಗುರಿಯಾಗಿದ್ದು, ಈ ಬಗ್ಗೆ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ" ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.
ವಿಧಾನ ಸೌಧದಲ್ಲಿ ವಸತಿ ಇಲಾಖೆ ಕುರಿತ ಸಂಪುಟ ಉಪ ಸಮಿತಿ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, "ವಸತಿ ಇಲಾಖೆಯಲ್ಲಿ ಅರ್ಹರಿಗೆ ಮನೆ ದೊರಕಲಿ ಎನ್ನುವ ಕಾರಣಕ್ಕಾಗಿ ಸಮಿತಿ ರಚನೆಯಾಗಿದೆ. ವಿವಿಧ ಸಚಿವರನ್ನು ಒಳಗೊಡಂತೆ ಸಮಿತಿಯ ಪ್ರಥಮ ಸಭೆ ನಡೆಸಿದ್ದೇವೆ" ಎಂದರು.
"ಸೂರಿಲ್ಲದ ಬಡವರಿಗೆ ಮನೆ ಸಿಗಬೇಕು ಎನ್ನುವುದು ನಮ್ಮ ಆಶಯ. ಸರ್ಕಾರವು ವಿವಿಧ ಹೆಸರಿನ ವಸತಿ ಯೋಜನೆಗಳನ್ನು ಒಂದೇ ಸೂರಿನಡಿ ತರಲು ಪ್ರಯತ್ನಿಸುತ್ತಿದೆ. ವಸತಿ ಇಲಾಖೆಯಲ್ಲಿ ಅರ್ಹರಿಗೆ ಸೂರು ನೀಡುವ ಉದ್ದೇಶದಿಂದ ಸಂಪುಟ ಉಪ ಸಮಿತಿ ರಚನೆ ಮಾಡಲಾಗಿದೆ" ಎಂದು ತಿಳಿಸಿದರು.
"ಸೂರಿಲ್ಲದ ಬಡವರಿಗೆ ಮನೆ ದೊರಕಬೇಕು ಎನ್ನುವುದು ಸರ್ಕಾರದ ಉದ್ದೇಶ. ಈ ವಿಚಾರವಾಗಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿರುವ ವಿಚಾರವಾಗಿ ಈಗಾಗಲೇ ತನಿಖೆ ನಡೆಯುತ್ತಿದೆ. ಐದಾರು ತಿಂಗಳುಗಳಲ್ಲಿ ವಸತಿ ಇಲಾಖೆಗೆ ಕಾಯಕಲ್ಪ ನೀಡಲಾಗುವುದು. ಈ ಬಗ್ಗೆ ಸಂಪುಟ ಉಪ ಸಮಿತಿಯಲ್ಲಿ ಸುದೀರ್ಘ ಚರ್ಚೆ ನಡೆಸಲಾಗುತ್ತಿದೆ. ಪ್ರತೀ ಫಲಾನುಭವಿಗಳಿಗೆ ಆಧಾರ್ ಹಾಗೂ ರೇಷನ್ ಕಾರ್ಡ್ ಲಿಂಕ್ ಮಾಡುವ ಮೂಲಕ ಅಕ್ರಮಕ್ಕೆ ತಡೆಯೊಡ್ಡಲು ಪ್ರಯತ್ನ ಮಾಡುತ್ತಿದ್ದೇವೆ" ಎಂದು ತಿಳಿಸಿದರು.