ನವದೆಹಲಿ, ಜ.14 (Daijiworld News/PY) : ಜೆಎನ್ಯು ವಿಶ್ವವಿದ್ಯಾನಿಲಯದ ಕುಲಪತಿ ಜಗದೀಶ್ ಕುಮಾರ್ ರಾಜೀನಾಮೆ ನೀಡುವವರೆಗೆ ನಾವು ಪಾಠ ಮಾಡುವುದಿಲ್ಲ ಎಂದು ಜೆಎನ್ಯು ಟೀಚರ್ಸ್ ಅಸೋಸಿಯೇಷನ್ ತಿಳಿಸಿದೆ.
ಜೆಎನ್ಯು ವಿಶ್ವವಿದ್ಯಾಲಯದ ಆವರಣದೊಳಗೆ ತಮ್ಮ ವಿಭಾಗಗಳ ಎದುರು ಸೋಮವಾರ ಪ್ರತಿಭಟನೆ ಹಮ್ಮಿಕೊಂಡ ಪ್ರಾಧ್ಯಾಪಕರು, ಕುಲಪತಿ ಸ್ಥಾನಕ್ಕೆ ಜಗದೀಶ್ ಕುಮಾರ್ ರಾಜೀನಾಮೆ ನೀಡುವ ತನಕ ಜೆಎನ್ಯು ಸಹಜ ಸ್ಥಿತಿಗೆ ಮರಳಲು ಸಾಧ್ಯವಿಲ್ಲ. ಆದ್ದರಿಂದ ಶೀಘ್ರವೇ ಜಗದೀಶ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ಟೀಚರ್ಸ್ ಅಸೋಸಿಯೇಷನ್ ತಿಳಿಸಿದೆ.
ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳು ಹಾಗೂ ಬೋಧಕರ ಮೇಲೆ ನಡೆದ ಹಲ್ಲೆ ಖಂಡನಾರ್ಹ. ಈ ವಿಚಾರವಾಗಿ ಕ್ಯಾಂಪಸ್ನಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಕುಲಪತಿ ಜಗದೀಶ್ ಕುಮಾರ್ ಹೇಳಿದಂತೆ ಕೇಳಲು ಸಾಧ್ಯವಿಲ್ಲ. ಅವರ ಮನಸ್ಥಿತಿಯನ್ನು ಒಪ್ಪಲು ಆಗಲ್ಲ ಎಂದು ಪ್ರಾಧ್ಯಾಪಕರು ಹೇಳಿದ್ದಾರೆ.
ಈಗಾಗಲೇ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಹಿಂಸಾಚಾರ ಪ್ರಕರಣ ಸಂಬಂಧ ದೆಹಲಿ ಪೊಲೀಸರು 49 ಮಂದಿಗೆ ನೋಟಿಸ್ ಜಾರಿಗೊಳಿಸಿದ್ದಾರೆ. ದೆಹಲಿ ಪೊಲೀಸರು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕ್ಯಾಂಪಸ್ನೊಳಗೆ ಕಿಡಿಗೇಡಿಗಳಿಂದ ತೀವ್ರ ಹಲ್ಲೆಗೊಳಗಾದ ಜೆಎನ್ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಶೆ ಘೋಷ್ ಸೇರಿದಂತೆ 19 ಮಂದಿ ವಿದ್ಯಾರ್ಥಿಗಳ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದರು.