ಇಂದೋರ್, ಜ.14 (Daijiworld News/PY) : "ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನನ್ನಂಥವರನ್ನು ಸಲಹೆಗಾರರನ್ನಾಗಿ ನೇಮಿಸಿಕೊಳ್ಳಬೇಕು" ಎಂದು ಯೋಗಗುರು ಬಾಬಾ ರಾಮ್ದೇವ್ ಹೇಳಿದ್ದಾರೆ.
ಮಧ್ಯ ಪ್ರದೇಶದ ಇಂದೋರ್ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, "ದೀಪಿಕಾ ಪಡುಕೋಣೆ ಅವರು ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಮುನ್ನ ದೇಶದ ಸಾಮಾಜಿಕ, ರಾಜಕೀಯ ವಿಷಯಗಳ ಬಗ್ಗೆ ತಿಳಿದುಕೊಳ್ಳಬೇಕು" ಎಂದು ಹೇಳಿದರು.
ಇತ್ತೀಚೆಗೆ ದೀಪಿಕಾ ಪಡುಕೋಣೆ ಜೆಎನ್ಯು ಹಿಂಸಾಚಾರ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಭೇಟಿ ಮಾಡಿದ್ದ ವಿಚಾರವಾಗಿ ದೇಶದಾದ್ಯಂತ ಚರ್ಚೆಗೆ ಒಳಗಾಗಿತ್ತು. ಈ ವಿಚಾರವಾಗಿ ಮಾತನಾಡಿದ ರಾಮ್ದೇವ್, "ದೀಪಿಕಾ ಪಡುಕೋಣೆ ದಕ್ಷ ನಟಿ ಎಂಬುದು ಬೇರೆ ಮಾತು. ಅದಾಗಿಯೂ ನಮ್ಮ ದೇಶದ ಬಗ್ಗೆ ಹೆಚ್ಚು ತಿಳಿಯುವ ನಿಟ್ಟಿನಲ್ಲಿ ಅವರು ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ವಿಷಯಗಳ ಬಗ್ಗೆ ಹೆಚ್ಚು ಅಧ್ಯಯನ ಮಾಡಬೇಕು. ಅದಾದ ಬಳಿಕವಷ್ಟೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಬೇಕು" ಎಂದು ಹೇಳಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆಗೆ ಬೆಂಬಲ ಸೂಚಿಸಿರುವ ರಾಮ್ದೇವ್, ಸಿಎಎಯ ವಿಸ್ತೃತ ರೂಪ ತಿಳಿಯದವರೂ ಕೂಡಾ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅಶ್ಲೀಲ ಭಾಷೆ ಬಳಸುತ್ತಿದ್ದಾರೆ ಎಂದು ತಿಳಿಸಿದರು.