ಬೆಂಗಳೂರು, ಜ.14 (Daijiworld News/PY) : ಪೋಕ್ಸೋ ಪ್ರಕರಣಗಳಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಕ್ಕಳ ಫೋಟೋ ಹಾಗೂ ವೈಯುಕ್ತಿಕ ವಿವರಗಳನ್ನು ಬಹಿರಂಗಪಡಿಸುವ ಪೊಲೀಸ್ ಅಧಿಕಾರಿಗಳು ಹಾಗೂ ಖಾಸಗಿ ವ್ಯಕ್ತಿಗಳ ವಿರುದ್ದ ಪೋಕ್ಸೋ ಕಾಯ್ದೆಯ ಕಲಂ 23ರ ಅನ್ವಯ ಕಾನೂನು ಕ್ರಮಕೈಗೊಳ್ಳಲು ಪೊಲೀಸ್ ಇಲಾಖೆ ಮುಂದಾಗಿದೆ.
ದೌರ್ಜನ್ಯಕ್ಕೆ ಒಳಪಟ್ಟ ಯಾವುದೇ ಮಗುವಿನ ಹೆಸರು, ಫೋಟೋ, ವಿಳಾಸ, ಕೌಟುಂಬಿಕ ಹಿನ್ನೆಲೆ, ಶಾಲಾ ವಿವರ ಹಾಗೂ ನೆರೆಹೊರೆಯ ವಿವರಗಳನ್ನು ಬಹಿರಂಗಪಡಿಸುವುದನ್ನು ನಿರ್ಬಂಧಿಸಲಾಗಿದೆ. ತನಿಖಾಧಿಕಾರಿಗಳು ಹಾಗೂ ಜಿಲ್ಲಾ ಎಸ್ಪಿಗಳು ಮಗುವಿನ ವೈಯುಕ್ತಿಕ ವಿವರಗಳನ್ನು ಬಿಡುಗಡೆ ಮಾಡುತ್ತಿರುವ ಕ್ರಮಕ್ಕೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅತೃಪ್ತಿ ವ್ಯಕ್ತಪಡಿಸಿದೆ.
ಪ್ರಕರಣದ ತನಿಖೆಯಲ್ಲಿ ಗೌಪ್ಯತೆ ಕಾಪಾಡದ ಪೊಲೀಸ್ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಎಲ್ಲಾ ರಾಜ್ಯಗಳ ಪೊಲೀಸ್ ಇಲಾಖೆಗಳಿಗೆ ಆಯೋಗ ಪತ್ರ ಬರೆದಿದೆ. ಆಯೋಗ ನೀಡಿದ ಪತ್ರದ ಆಧಾರದಂತೆ ಕೈಗೊಂಡಿರುವ ಕ್ರಮಗಳ ಕುರಿತು ಜ.30ರ ಒಳಗೆ ದೆಹಲಿ ಕಚೇರಿಗೆ ವರದಿ ಕಳುಹಿಸುವುದು ಕಡ್ಡಾಯ ಎಂದು ನಿರ್ದೇಶನ ತಿಳಿಸಿದೆ.
ಆಯೋಗ ನೀಡಿದ ಸೂಚನೆ ಹಿನ್ನೆಲೆಯಲ್ಲಿ ಪೋಕ್ಸೋ ಕಾಯ್ದೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಜಾರಿ ಮಾಡಲಾಗಿರುವ ಎಲ್ಲ ನಿಯಮ ಹಾಗೂ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಡಿಜಿಪಿ ನೀಲಮಣಿ ಎಸ್ ರಾಜು, ರಾಜ್ಯದ ಎಲ್ಲಾ ಕಮಿಷನರ್ಗಳು, ಜಿಲ್ಲಾ ಎಸ್ಪಿಗಳು ಹಾಗೂ ಠಾಣಾಧಿಕಾರಿಗಳಿಗೆ ಲಿಖಿತ ರೂಪದಲ್ಲಿ ಸೂಚನೆ ನೀಡಿದ್ದಾರೆ.
ಅಲ್ಲದೇ, ಮಗುವಿನ ವೈಯುಕ್ತಿಕ ವಿವರಗಳನ್ನು ಬಹಿರಂಗಗೊಳಿಸುವ ಮುದ್ರಣ ಹಾಗೂ ದೃಶ್ಯ ಮಾಧ್ಯಮ ಸಂಸ್ಥೆ ಹಾಗೂ ಅದನ್ನು ವರದಿ ಮಾಡಿದ ವರದಿಗಾರರ ವಿರುದ್ದವೂ ಕಡ್ಡಾಯವಾಗಿ ಕಾನೂನು ಕ್ರಮ ಕೈಗೊಳ್ಳಲು ಆಯೋಗ ಸೂಚಿಸಿದೆ. ಸುದ್ದಿ ಬರವಣಿಗೆ ಹಾಗೂ ಪ್ರಕಟಣೆಯಲ್ಲಿ ವರದಿಗಾರ ಮಾಡಿದ ಲೋಪಗಳಿಗೆ ಮಾಧ್ಯಮ ಸಂಸ್ಥೆಯ ಮಾಲೀಕ ಅಥವಾ ಪ್ರಕಾಶಕರು ಹೊಣೆಗಾರರಾಗಿರುತ್ತಾರೆ. ಹೀಗಾಗಿ ಇಬ್ಬರ ವಿರುದ್ದವೂ ಪ್ರಕರಣ ದಾಖಲಿಸುವಂತೆ ಸೂಚಿಸಲಾಗಿದೆ.